ಶಿವಮೊಗ್ಗ: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ, ಪ್ರತಿಭಾವಂತ ಸಂಭಾಷಣೆ ಬರಹಗಾರ ಹಾಗೂ ಲೇಖಕ ಟಿ.ಜಿ. ನಂದೀಶ್ (37) ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದ ನಂದೀಶ್, ತಮ್ಮ ಸಾಹಿತ್ಯ ಹಾಗೂ ಸಿನಿಮಾ ಬರವಣಿಗೆಯ ಮೂಲಕ ವ್ಯಾಪಕ ಗಮನ ಸೆಳೆದಿದ್ದರು.
ಮಂಗಳವಾರ ರಾತ್ರಿ ಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ, ಕುಟುಂಬಸ್ಥರು ಅವರನ್ನು ತಕ್ಷಣವೇ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಮೂಲದವರಾದ ನಂದೀಶ್, 'ಚಿತ್ತಾರ' ಸಂಸ್ಥೆಯ ಜೊತೆಗೂಡಿ ಕನ್ನಡದ ಹಲವಾರು ಧಾರಾವಾಹಿ ಹಾಗೂ ಚಲನಚಿತ್ರಗಳಿಗೆ ಕಥೆಗಳನ್ನು ಬರೆಯುವುದರ ಜೊತೆಗೆ, ಸಾಕಷ್ಟು ಹೊಸ ನಟ-ನಟಿಯರನ್ನು ಪರಿಚಯಿಸುವ ಮೂಲಕ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದರು. ಮಾಳೂರಿನಿಂದಲೇ ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಕಥೆಗಳನ್ನು ಒದಗಿಸುತ್ತಿದ್ದ ಖ್ಯಾತಿ ಅವರಿಗೆ ಇತ್ತು. ಮಾಳೂರು ಭಾಗದಲ್ಲಿ 'ಹೊಗೆಸೊಪ್ಪು ಗಂಗಾಧರಯ್ಯ' ಎಂದೇ ಪ್ರಸಿದ್ಧರಾಗಿದ್ದ ಅವರ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ನಂದೀಶ್ ಅವರ ಅಂತಿಮ ದರ್ಶನಕ್ಕೆ ಸ್ವಗೃಹ ಮಾಳೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 12:30 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.
PublicNext
20/05/2026 10:33 pm