ಭಟ್ಕಳ: ಹೆದ್ದಾರಿ ಕಾಮಗಾರಿಗಾಗಿ ತೆರವುಗೊಳಿಸಲು ಉದ್ದೇಶಿಸಿರುವ ಪಟ್ಟಣದ ನವಾಯತ್ ಕಾಲೋನಿಯ ಮೂರಿನಕಟ್ಟೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ನಾಗೇಶ ನಾಯ್ಕ ತೆಂಗಿನಗುಂಡಿ, ಹೆದ್ದಾರಿ ಕಾಮಗಾರಿಯಿಂದ ತೆರವುಗೊಂಡ ಮೂರಿನಕಟ್ಟೆಯನ್ನು ಮರುನಿರ್ಮಿಸಿ ನೀಡುವುದಾಗಿ ತಾಲ್ಲೂಕು ಆಡಳಿತ ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
“ಮೂರಿನಕಟ್ಟೆ ಹಿಂದೂ ಸಮುದಾಯದ ಪವಿತ್ರ ಸ್ಥಳವಾಗಿದೆ. ಪ್ರತಿವರ್ಷ ಅಮ್ಮನ ಹೊರಯನ್ನು ಇದೇ ಸ್ಥಳದಲ್ಲಿ ಪೂಜಿಸಲಾಗುತ್ತದೆ. ಈಗ ಕಟ್ಟೆಯ ಎದುರು ಖಾಸಗಿ ಮನೆ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ಕಾರಣ ನೀಡಿ ಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ಕೂಡಲೇ ಅದೇ ಸ್ಥಳದಲ್ಲಿ ಕಟ್ಟೆ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಸ್ಥಳೀಯರೇ ಮುಂದಾಗಿ ಕಟ್ಟೆ ನಿರ್ಮಾಣ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಶಹರ ಠಾಣೆ ಸಿಪಿಐ ದಿವಾಕರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಮುಂದಿನ ಎರಡು ದಿನಗಳೊಳಗೆ ಸಭೆ ಕರೆದು ತಾಲ್ಲೂಕು ಆಡಳಿತದಿಂದ ಕಟ್ಟೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲಿಯವರೆಗೆ ಯಾರೂ ಉದ್ವಿಗ್ನರಾಗಬಾರದು ಎಂದು ಮನವಿ ಮಾಡಿದರು.
ಸಿಪಿಐ ಭರವಸೆಗೆ ಒಪ್ಪಿದ ಪ್ರತಿಭಟನಾಕಾರರು, ಮುಂದಿನ ಸೋಮವಾರದೊಳಗೆ ಕಟ್ಟೆ ನಿರ್ಮಾಣ ಪ್ರಾರಂಭವಾಗದಿದ್ದರೆ ತಾವೇ ಮುಂದಾಗಿ ಕಟ್ಟೆ ನಿರ್ಮಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶ್ರೀನಿವಾಸ ನಾಯ್ಕ ಹನುಮಾನನಗರ, ಚಂದ್ರ ನಾಯ್ಕ, ವೆಂಕಟ್ರಮಣ ನಾಯ್ಕ, ನಾಗೇಶ ನಾಯ್ಕ, ಜಗಧೀಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
PublicNext
21/05/2026 08:34 pm
LOADING...