ಭಟ್ಕಳ: ಭಟ್ಕಳದಲ್ಲಿ ಶಿರಸಿ ಮಾರಿಕಾಂಬೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹೊರೆ ಇಡುವ 'ಮುರಿನಕಟ್ಟೆ' ನಾಶವಾಗಿದೆ ಎಂಬ ವದಂತಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ, ಸಾಂಪ್ರದಾಯಿಕವಾಗಿ ಹೊರೆ ಇಡಲಾಗುತ್ತಿರುವ ಮೂಲ 'ಮುರಿನಕಟ್ಟೆ' ಯಥಾಸ್ಥಿತಿಯಲ್ಲಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಲಾಗಿದೆ.
ಹೊಸ ಕಟ್ಟೆಗೆ ಹಾನಿ ಮತ್ತು ಕಾನೂನು ಕ್ರಮ
ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಹೊಸ ಕಟ್ಟೆಯನ್ನು ಮಾತ್ರ ಕೆಲವು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈ ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ. ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಬಿ.ಎನ್.ಎಸ್.ಎಸ್ ಕಾಯ್ದೆಯ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಾರ್ವಜನಿಕರಿಗೆ ಜಿಲ್ಲಾಡಳಿತದ ಮನವಿ
ಯಾವುದೇ ವದಂತಿಗಳು ಅಥವಾ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಶಾಂತಿಯನ್ನು ಕಾಪಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
PublicNext
25/05/2026 04:47 pm
LOADING...