ಸಿದ್ದಾಪುರ : ಶಿರಸಿ-ಸಿದ್ದಾಪುರ ಕ್ಷೇತ್ರದ ಬಹುದಿನಗಳ ಕನಸಾಗಿದ್ದ ಕಾನಸೂರ ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಅಡ್ಕಳ್ಳಿ ರಸ್ತೆಯಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ದಶಕಗಳ ಬೇಡಿಕೆಯಾಗಿದ್ದ ಕಾನಸೂರ ವಿದ್ಯುತ್ ಗ್ರಿಡ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ಆಡುಕಟ್ಟಾ, ಹತ್ತರಗಿ ಹಾಗೂ ಹುಲೇಕಲ್ ಬಳಿ ಉಪಕೇಂದ್ರ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವರು ಲಿಖಿತವಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಗುಣಮಟ್ಟದ ವಿದ್ಯುತ್‌ಗೆ ಆದ್ಯತೆ
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರವು 200 ಯುನಿಟ್ ವರೆಗಿನ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ನಾಗರಿಕರಿಗೆ ಗುಣಮಟ್ಟದ ವಿದ್ಯುತ್ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ನಗರ ಪ್ರದೇಶಗಳಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ವಿದ್ಯುತ್ ಗ್ರಾಮೀಣ ಭಾಗದ ಕಟ್ಟಕಡೆಯ ಮನೆಗಳಿಗೂ ತಲುಪಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ವಿದ್ಯುತ್ ಸಮಸ್ಯೆ ನಿವಾರಣೆಗೆ ಗ್ರಿಡ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದೆ. ಇದರ ಸಂಪೂರ್ಣ ಶ್ರೇಯಸ್ಸು ಶಾಸಕ ಭೀಮಣ್ಣ ನಾಯ್ಕರಿಗೆ ಸಲ್ಲುತ್ತದೆ. ಕಳೆದ 50 ವರ್ಷಗಳಿಂದ ತಲೆದೋರಿದ್ದ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಿರುವ ಶಾಸಕರಿಗೆ ತಾಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಅವಧಿಯಲ್ಲಿ ಅವರು 500 ಕೋಟಿ ರೂ.ಗೂ ಅಧಿಕ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ ಎಂದರು.
ಬಗರಹುಕ್ಕುಂ ಸಮಿತಿಯ ಎಸ್.ಕೆ. ಭಾಗವತ ಮಾತನಾಡಿ, ದಟ್ಟಾರಣ್ಯದಿಂದ ಕೂಡಿದ ಈ ಪ್ರದೇಶದಲ್ಲಿ ನಿತ್ಯ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿದೆ. ಕ್ಷೇತ್ರದ ಕಟ್ಟಕಡೆಯ ಜನರ ಸಮಸ್ಯೆಯನ್ನು ಅರಿತ ಭೀಮಣ್ಣ ನಾಯ್ಕ ಅವರು ತುಂಬು ಮನಸ್ಸಿನಿಂದ ಸ್ಪಂದಿಸಿದ್ದಾರೆ. ತಾಲೂಕಿನ ಪ್ರಮುಖ ಬೇಡಿಕೆಯಾಗಿದ್ದ ವಿದ್ಯುತ್ ಸಮಸ್ಯೆಗೆ ಈ ಗ್ರಿಡ್ ನಿರ್ಮಾಣದಿಂದ ಪರಿಹಾರ ದೊರೆಯಲಿದೆ ಎಂದರು.
ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ
ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಶಿಲ್ಪಾ ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ದಶಕಗಳ ನಂತರ ಜಿಲ್ಲೆಗೆ ಪ್ರತ್ಯೇಕ ವಿದ್ಯುತ್ ಗ್ರಿಡ್ ಸಿಗುತ್ತಿದ್ದು, ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಶಿರಸಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಸುಮಾ ಉಗ್ರಾಣಕರ್, ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡರ್, ಬಗರಹುಕ್ಕುಂ ಸಮಿತಿಯ ಎಸ್.ಕೆ. ಭಾಗವತ, ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತ್ತಲಕೊಪ್ಪ, ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ಶಿಲ್ಪಾ ಎಂ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೆ.ವಿ. ಪಾಗಿ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸುನೀಲಕುಮಾರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
PublicNext
25/05/2026 06:21 pm