ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಯನೈಡ್ ಸುಂದರಿ ಜೊಲ್ಲಿ ಜೋಸೆಫ್ ಕಥೆ : 14 ವರ್ಷಗಳಲ್ಲಿ 6 ಕೊಲೆ ಮಾಡಿದ ‘ಸಜ್ಜನ’ ಮಹಿಳೆಯ ಭೀಕರ ಮುಖವಾಡ!

ತಿರುವನಂತಪುರಂ (ಕೇರಳ): ಕೇರಳದ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಹಾಗೂ ಬೆಚ್ಚಿಬೀಳಿಸುವ ಅಪರಾಧ ಸರಣಿ ಎನಿಸಿಕೊಂಡಿರುವ ‘ಕೂಡತ್ತಾಯಿ ಸಯನೈಡ್ ಕೊಲೆ ಪ್ರಕರಣ’ದ (Koodathayi Cyanide Case) ಕರಾಳ ಇತಿಹಾಸವನ್ನು ನೆನಪಿಸುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರಿ ವೈರಲ್ ಆಗುತ್ತಿದೆ.

ಟ್ವಿಟರ್ (X) ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ಪೋಸ್ಟ್, ಸಾರ್ವಜನಿಕರು ಸದಾ ಜಾಗೃತರಾಗಿರಬೇಕು ಮತ್ತು ಇಂತಹ ಘಟನೆಗಳನ್ನು ಮರೆಯಬಾರದು ಎಂದು ಕರೆಯಿತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ಫೋಟೋದಲ್ಲಿ, ಜೊಲ್ಲಿ ಜೋಸೆಫ್ ಎಂಬ ಮಹಿಳೆ ಗುಲಾಬಿ ಬಣ್ಣದ ಸೀರೆ ಉಟ್ಟು, ಸ್ಕೂಟರ್ ಪಕ್ಕದಲ್ಲಿ ನಿಂತು ಅತ್ಯಂತ ಮುಗ್ಧವಾಗಿ ನಗುತ್ತಿರುವುದನ್ನು ಕಾಣಬಹುದು. ಯಾರೇ ನೋಡಿದರೂ ಈಕೆ ಒಬ್ಬ ಸಾಮಾನ್ಯ, ಸಭ್ಯ ಗೃಹಿಣಿ ಎಂದೇ ಭಾವಿಸುವಂತಿದೆ. ಆದರೆ ಈ ಸಾಮಾನ್ಯ ಮುಖವಾಡದ ಹಿಂದೆ ಅಡಗಿತ್ತು ಹದಿನಾಲ್ಕು ವರ್ಷಗಳ ಕಾಲ ನಡೆದ ಭೀಕರ ಸರಣಿ ಹತ್ಯೆಗಳ ರಹಸ್ಯ!

ಜೊಲ್ಲಿ ಜೋಸೆಫ್ ತಾನು ಪ್ರತಿಷ್ಠಿತ 'ಎನ್‌ಐಟಿ ಕ್ಯಾಲಿಕಟ್' (NIT Calicut) ಸಂಸ್ಥೆಯಲ್ಲಿ ಕಾಮರ್ಸ್ ಉಪನ್ಯಾಸಕಿಯಾಗಿದ್ದೇನೆ ಎಂದು ಇಡೀ ಊರಿಗೇ ಸುಳ್ಳು ಹೇಳಿದ್ದಳು. ಪ್ರತಿದಿನ ಬೆಳಗ್ಗೆ ಕಾಲೇಜಿಗೆ ಹೋಗುವಂತೆ ನಟಿಸಿ ಸಾರ್ವಜನಿಕವಾಗಿ ಗೌರವಾನ್ವಿತ ಸ್ಥಾನ ಗಿಟ್ಟಿಸಿಕೊಂಡಿದ್ದಳು. ಅಷ್ಟೇ ಅಲ್ಲದೆ, ಚರ್ಚ್‌ಗೆ ನಿಯಮಿತವಾಗಿ ಹೋಗುತ್ತಾ, ಎಲ್ಲರಿಗೂ ಸಹಾಯ ಮಾಡುವ ‘ದೇವಮಾನವಿ’ಯಂತೆ ಬಿಂಬಿಸಿಕೊಂಡಿದ್ದಳು.

ಆಸ್ತಿ ಹಾಗೂ ವೈಯಕ್ತಿಕ ಸುಖಕ್ಕಾಗಿ ಜೊಲ್ಲಿ ತನ್ನದೇ ಕುಟುಂಬದ 6 ಜನರನ್ನು ಅತ್ಯಂತ ವ್ಯವಸ್ಥಿತವಾಗಿ ಸಯನೈಡ್ (Cyanide) ವಿಷ ನೀಡಿ ಕೊಂದಿದ್ದಾಳೆ ಎಂಬ ಆರೋಪವಿದೆ. 2002 ರಿಂದ 2016 ರ ಅವಧಿಯಲ್ಲಿ ಆಕೆಯ ಮೊದಲ ಪತಿ ರಾಯ್ ಥಾಮಸ್ ಸೇರಿದಂತೆ ಮಾವ, ಅತ್ತೆ ಮತ್ತು ಕುಟುಂಬದ ಇತರ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರತಿ ಬಾರಿಯೂ ಇವು ಸಾಮಾನ್ಯ ಹೃದಯಾಘಾತ ಅಥವಾ ಅನಾರೋಗ್ಯದ ಸಾವುಗಳೆಂದೇ ಬಿಂಬಿಸಲಾಗಿತ್ತು. ಕುಟುಂಬಸ್ಥರು ಆಕೆಯನ್ನು ಅತಿಯಾಗಿ ನಂಬಿದ್ದರಿಂದ ಯಾರೂ ಶಂಕಿಸಿರಲಿಲ್ಲ.

2019 ರಲ್ಲಿ ಕುಟುಂಬದ ಹತ್ತಿರದ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಸಮಾಧಿಗಳನ್ನು ತೋಡಿ, ಮೃತದೇಹಗಳ ಅವಶೇಷಗಳನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲರ ದೇಹದಲ್ಲೂ ಸಯನೈಡ್ ಅಂಶ ಪತ್ತೆಯಾಗಿ ಇಡೀ ದೇಶವೇ ನಡುಗುವಂತಾಯಿತು.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ‘ಕರಿ ಆಂಡ್ ಸಯನೈಡ್’ (Curry & Cyanide) ಎಂಬ ಡಾಕ್ಯುಮೆಂಟರಿ ಈ ಇಡೀ ಪ್ರಕರಣವನ್ನು ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ತಂದಿತ್ತು. ಕೇವಲ ಕುರುಡು ನಂಬಿಕೆಯಿಂದಾಗಿ ಇಷ್ಟೊಂದು ಭೀಕರ ಕೊಲೆಗಳು ಹೇಗೆ ಯಾರಿಗೂ ತಿಳಿಯದಂತೆ ನಡೆದುಹೋದವು ಎಂಬ ಆಘಾತಕಾರಿ ಸತ್ಯವನ್ನು ಈ ಸಾಕ್ಷ್ಯಚಿತ್ರ ಬಿಚ್ಚಿಟ್ಟಿತ್ತು. ಇದೀಗ ಇಂಟರ್ನೆಟ್ ಲೋಕದಲ್ಲಿ ಈ ಕರಾಳ ಕಥೆಯನ್ನು ಮತ್ತೊಮ್ಮೆ ರೀಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

Edited By : Nagaraj Tulugeri
PublicNext

PublicNext

25/05/2026 01:12 pm

Cinque Terre

12.99 K

Cinque Terre

0

ಸಂಬಂಧಿತ ಸುದ್ದಿ