ವಿಶ್ವ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ, ನಮ್ಮ ಸುತ್ತಮುತ್ತಲಿನ ಕೆಲವು ಆಚರಣೆಗಳು ಇಂದಿಗೂ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತಿವೆ. ಪ್ರೀತಿ, ಕರುಣೆ ಹಾಗೂ ಮಾನವೀಯತೆಯ ಪಾಠ ಕಲಿಯಬೇಕಾದ ವಯಸ್ಸಿನಲ್ಲಿ, ಎಳೆಯ ಮಕ್ಕಳಿಗೆ ಪ್ರಾಣಿ ಬಲಿಯಂತಹ ಕ್ರೂರ ಕೃತ್ಯಗಳನ್ನು ಕಣ್ಣಾರೆ ತೋರಿಸಲಾಗುತ್ತಿದೆ. ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳು ಸ್ವತಃ ಮಕ್ಕಳ ಕೈಯಲ್ಲೇ ಪ್ರಾಣಿಗಳನ್ನ ಕೊಲೆ ಮಾಡಿ ಮಾರಾಟ ಮಾಡುವ ಕೃತ್ಯಗಳನ್ನು ಕಲಿಸುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಯಾವುದೇ ಒಂದು ಮಗು ಹುಟ್ಟುತ್ತಲೇ ಕ್ರೂರಿಯಾಗಿರುವುದಿಲ್ಲ. ಆದರೆ ಹಬ್ಬ-ಹರಿದಿನಗಳು, ಜಾತ್ರೆ ಅಥವಾ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಮೂಕ ಪ್ರಾಣಿಗಳ ಗಂಟಲು ಸೀಳುವುದನ್ನು, ರಕ್ತ ಹರಿಸುವುದನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಪರಿಚಯಿಸಲಾಗುತ್ತಿದೆ. ಪ್ರಾಣಿಗಳ ಕಿರುಚಾಟ, ರಕ್ತದ ಮಡುವನ್ನು ನೋಡುವ ಮಕ್ಕಳ ಮನಸ್ಸಿನಲ್ಲಿ ಹಿಂಸೆ ಎನ್ನುವುದು ತೀರಾ ಸಹಜ ಪ್ರಕ್ರಿಯೆ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ಇದು ಅವರ ಭವಿಷ್ಯದ ವ್ಯಕ್ತಿತ್ವದ ಮೇಲೆ ಅತ್ಯಂತ ಆಘಾತಕಾರಿ ಪರಿಣಾಮ ಬೀರಬಹುದು ಎಂದು ಮನಶ್ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
"ಮಕ್ಕಳು ದೇಶದ ಸಂಪತ್ತು" ಎಂದು ಬಾಯಿ ತುಂಬಾ ಆಡುವ ನಾವು, ಅವರ ಕೈಗೆ ಉತ್ತಮ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಪುಸ್ತಕಗಳನ್ನು ನೀಡಬೇಕಲ್ಲವೇ? ಪ್ರಾಣಿ ಹಿಂಸೆಯಂತಹ ಅಮಾನವೀಯ ಆಚರಣೆಗಳ ಬದಲು ಕರುಣೆ, ಪರಿಸರ ಪ್ರೇಮ ಮತ್ತು ಸಹಬಾಳ್ವೆಯ ಪಾಠಗಳನ್ನು ಕಲಿಸಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದೆ.
ಮೂಢನಂಬಿಕೆ ಮತ್ತು ಕ್ರೌರ್ಯದ ಹಿನ್ನೆಲೆಯಿರುವ ಆಚರಣೆಗಳಿಗೆ ಮಕ್ಕಳನ್ನು ದಾಳವಾಗಿಸುವ ಬದಲು, ಅವರಿಗೆ ಉತ್ತಮ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡುವುದು ಪೋಷಕರು ಹಾಗೂ ಸಮಾಜದ ಕರ್ತವ್ಯವಲ್ಲವೇ? ಕಾನೂನಿನ ಪ್ರಕಾರ ಪ್ರಾಣಿ ಬಲಿ ನಿಷೇಧವಾಗಿದ್ದರೂ, ಕದ್ದುಮುಚ್ಚಿ ನಡೆಯುವ ಇಂತಹ ಆಚರಣೆಗಳಿಂದ ಮಕ್ಕಳನ್ನು ದೂರವಿಡಬೇಕಾದ ಜವಾಬ್ದಾರಿ ಈಗ ಸಮಾಜದ ಮೇಲಿದೆ.
PublicNext
25/05/2026 06:41 pm