ಬ್ರಸೆಲ್ಸ್: ಬೆಲ್ಜಿಯಂನ ಉತ್ತರ ಭಾಗದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್‌ಗೆ ರೈಲು ಡಿಕ್ಕಿ ಹೊಡೆದಿದ್ದು, ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಅಪಘಾತಕ್ಕೀಡಾದ ಮಿನಿಬಸ್‌ನಲ್ಲಿ ಚಾಲಕ, ಓರ್ವ ಮೇಲ್ವಿಚಾರಕಿ ಮತ್ತು ಏಳು ಮಕ್ಕಳು ಸೇರಿದಂತೆ ಒಟ್ಟು ಒಂಬತ್ತು ಜನರಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು, ಬಸ್ ಚಾಲಕ ಮತ್ತು ಮೇಲ್ವಿಚಾರಕಿ ಸೇರಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಮಿನಿಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಬೆಳಗ್ಗೆ ಸುಮಾರು 8:08ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಮುಂದಿನ ನಿಲ್ದಾಣಕ್ಕೆ ತೆರಳುತ್ತಿದ್ದ ರೈಲು, ರೈಲ್ವೆ ಕ್ರಾಸಿಂಗ್‌ನಲ್ಲಿ ಮಿನಿಬಸ್‌ಗೆ ಅಪ್ಪಳಿಸಿದೆ. ರೈಲ್ವೆ ಕ್ರಾಸಿಂಗ್‌ನಲ್ಲಿ ಕೆಂಪು ಸಿಗ್ನಲ್ ಇದ್ದು, ಗೇಟ್ ಬ್ಯಾರಿಯರ್‌ಗಳು ಮುಚ್ಚಿದ್ದರೂ ಮಿನಿಬಸ್ ಹಳಿಯ ಮೇಲೆ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ರೈಲು ಮಾರ್ಗದ ಬಳಿ ತುರ್ತು ಚಿಕಿತ್ಸಾ ಶಿಬಿರಗಳನ್ನು ಸ್ಥಾಪಿಸಿ ರಕ್ಷಣಾ ಕಾರ್ಯವನ್ನು ಮುಂದುವರಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
26/05/2026 07:41 pm
LOADING...