ಕುಂದಾಪುರ: ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಅರ್ಹರಿಗೆ ಭೂಮಿ ಹಕ್ಕು ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕಳೆದ ವಾರ ವಂಡ್ಸೆ ಹೋಬಳಿಯಲ್ಲಿ 50 ಕ್ಕೂ ಮಿಕ್ಕಿ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಗಿದೆ. ಪ್ರಸ್ತುತ ಕ್ಷೇತ್ರದ ಅರ್ಹ 24 ಕುಟುಂಬಕ್ಕೆ 94 ಸಿ ಹಾಗೂ 94 ಸಿಸಿ ಅಡಿ ಹಕ್ಕು ಪತ್ರ ವಿತರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಒದಗಿಸುವುದೇ ನನ್ನ ಮೊದಲ ಆದ್ಯತೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.
ಅವರು ಬೈಂದೂರು ತಾಲೂಕು ಕಚೇರಿ ಪ್ರಜಾ ಸೌಧದ ಕೋರ್ಟ್ ಹಾಲ್ ನಲ್ಲಿ ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಹಾಗೂ 94 ಸಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿಮಾತನಾಡಿದರು.
ಈ ಸಂದರ್ಭ ಬೈಂದೂರು ವಿಧಾನ ಸಭಾ ಕ್ಷೇತ್ರದ ಬೈಂದೂರು, ತಗ್ಗರ್ಸೆ ಹಾಗೂ ಯಡ್ತರೆ ಗ್ರಾಮಗಳ 09 ಫಲಾನುಭವಿಗಳಿಗೆ 94 ಸಿಸಿ ಹಾಗೂ ಗೋಳಿಹೊಳೆ, ಜಡ್ಕಲ್, ಮುದೂರು, ಯಳಜಿತ್, ನಾಡ, ನಾವುಂದ, ಕಾಲ್ತೊಡು ಹಾಗೂ ಬಿಜೂರು ಗ್ರಾಮಗಳ 15 ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರ ವಿತರಿಸಲಾಯಿತು. ಬೈಂದೂರು ತಹಸೀಲ್ದಾರ್ ರಾಮಚಂದ್ರಪ್ಪ, ಕಂದಾಯ ನಿರೀಕ್ಷಕ ಉಪೇಂದ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
28/05/2026 12:39 pm
LOADING...