ಮಂಗಳೂರು: ಕರಾವಳಿಯ ಜೀವನಾಡಿ ಆಳಸಮುದ್ರ ಮೀನುಗಾರಿಕೆ ಚಟುವಟಿಕೆ ಈ ತಿಂಗಳ ಅಂತ್ಯಕ್ಕೆ ಅಧಿಕೃತವಾಗಿ ಮುಕ್ತಾಯವಾಗಲಿದೆ. ಜೂನ್ 1ರಿಂದ 61ದಿನಗಳ ಕಾಲ ಸರ್ಕಾರ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೋಟುಗಳು ದಡ ಸೇರುತ್ತಿವೆ.
ಸದ್ಯ ಅಂತ್ಯಗೊಳ್ಳುತ್ತಿರುವ 2025-26ರ ಮೀನುಗಾರಿಕೆ ಋತು ಕರಾವಳಿಯ ಮೀನುಗಾರರಿಗೆ ಮಿಶ್ರ ಅನುಭವ ನೀಡಿದರೂ, ಒಟ್ಟಾರೆ ಲ್ಯಾಂಡಿಂಗ್ ಮತ್ತು ಮೌಲ್ಯದ ದೃಷ್ಟಿಯಲ್ಲಿ ಕಳೆದೆರಡು ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಿಸಿದೆ. ಮೀನುಗಾರಿಕಾ ಇಲಾಖೆಯ ಅಂಕಿಅಂಶಗಳ ಪ್ರಕಾರ 2023-24ರಲ್ಲಿ ದ.ಕ.ಜಿಲ್ಲೆಯಲ್ಲಿ ಒಟ್ಟು 1,47,589 ಮೆಟ್ರಿಕ್ ಟನ್ ಮೀನು ಲ್ಯಾಂಡಿಂಗ್ ಆಗಿ 1990 ಕೋಟಿ ರೂ. ಮೌಲ್ಯ ದಾಖಲಾಗಿತ್ತು. 2024-25ರಲ್ಲಿ ಇದು 1,71,795 ಮೆಟ್ರಿಕ್ ಟನ್‌ಗೆ ಏರಿಕೆಯಾಗಿ 2,220 ಕೋಟಿ ರೂ. ಮೌಲ್ಯ ದಾಖಲಾಗಿತ್ತು. ಆದರೆ 2025-26ರಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಒಟ್ಟು 1,97,381 ಮೆಟ್ರಿಕ್ ಟನ್ ಮೀನು ಲ್ಯಾಂಡಿಂಗ್ ಆಗಿದೆ. ಇದರ ಒಟ್ಟು ಮೌಲ್ಯ 3,856 ಕೋಟಿ ರೂ. ತಲುಪಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 1,636 ಕೋಟಿ ರೂ.ಹೆಚ್ಚು ಮೌಲ್ಯದ ಮೀನು ಲ್ಯಾಂಡಿಂಗ್ ದಾಖಲಾಗಿದೆ.
ಈ ಬಾರಿಯ ಸೀಸನ್‌ನಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಅಧಿಕ ಪ್ರಮಾಣದ ಮೀನುಗಾರಿಕೆ ನಡೆದಿದೆ. ಸೆಪ್ಟೆಂಬರ್‌ನಲ್ಲಿ 31ಸಾವಿರ ಮೆಟ್ರಿಕ್ ಟನ್‌ಗೂ ಅಧಿಕ ಮೀನು ಲ್ಯಾಂಡಿಂಗ್ ಆಗಿದ್ದರೆ, ಅಕ್ಟೋಬರ್‌ನಲ್ಲಿ 5,291ಲಕ್ಷಕ್ಕೂ ಅಧಿಕ ಮೌಲ್ಯದ ಮೀನುಗಾರಿಕೆ ನಡೆದಿದೆ. ಡಿಸೆಂಬರ್‌ನಲ್ಲೂ ಉತ್ತಮ ಪ್ರಮಾಣದ ಮೀನು ಸಿಕ್ಕಿದ್ದು ಬಂದರುಗಳಲ್ಲಿ ಭಾರೀ ಚಟುವಟಿಕೆ ಕಂಡುಬಂದಿತ್ತು.
ಮೀನುಗಾರ ವಲಯದಲ್ಲೂ ಈ ಬಾರಿಯ ಸೀಸನ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ ಉತ್ತಮ ಪ್ರಮಾಣದ ಮೀನು ಸಿಕ್ಕಿದ್ದರಿಂದ ಮೀನುಗಾರರಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಬಳಿಕ ಹವಾಮಾನ ವೈಪರೀತ್ಯದಿಂದ ಸಮುದ್ರದ ಆಳ ಭಾಗಕ್ಕೆ ಮೀನುಗಳು ಹೋಗಿರುವುದು ಹಾಗೂ ಕಾರ್ಯಾಚರಣಾ ವೆಚ್ಚ ಏರಿಕೆಯಿಂದ ಲಾಭದ ಮೇಲೆ ಪರಿಣಾಮ ಬೀರಿದೆ ಎಂದು ಮೀನುಗಾರರು ಹೇಳುತ್ತಿದ್ದಾರೆ.
PublicNext
28/05/2026 04:08 pm