Public Next ವಿಶೇಷ ವರದಿ
ಉಡುಪಿ ; ಜಿಲ್ಲಾ ಆಸ್ಪತ್ರೆ ಬ್ರಿಟಿಷರ ಕಾಲದ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾದರೂ, ಕಾಲಾನುಗುಣ ಸೌಲಭ್ಯಗಳ ಕೊರತೆ ಹಾಗೂ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯಿಂದಾಗಿ ಹಲವು ಸಮಸ್ಯೆಗಳು ಇಲ್ಲಿ ತಲೆದೋರಿವೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ 250 ಬೆಡ್‌ಗಳ ನೂತನ ಸುವ್ಯವಸ್ಥಿತ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿರೀಕ್ಷೆಯೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಆದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಜಿಲ್ಲಾ ಆಸ್ಪತ್ರೆಯಾದರೂ ಕೂಡ ತಾಲೂಕು ಆಸ್ಪತ್ರೆ ಮಟ್ಟದ ಸಿಬ್ಬಂದಿಯೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಹುದ್ದೆಗಳು ಇನ್ನೂ ಖಾಲಿ ಉಳಿದಿವೆ ಎನ್ನಲಾಗಿದೆ. ಇದರಿಂದ ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ಸೇವೆ ನೀಡಲು ಸವಾಲು ಎದುರಾಗುತ್ತಿದೆ.
ಇನ್ನು ಔಷಧಿಗಳ ಕೊರತೆ ಕೂಡ ಸಾರ್ವಜನಿಕರನ್ನು ಕಾಡುತ್ತಿದೆ. ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಲಭ್ಯವಿಲ್ಲದೆ, ಅನೇಕ ರೋಗಿಗಳು ಹೊರಗಡೆಯಿಂದಲೇ ಔಷಧಿ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ, ಆನ್‌ಲೈನ್ ಟೆಂಡರ್ ಮೂಲಕ ಔಷಧಿ ಸರಬರಾಜು ಮಾಡುವ ಕಂಪನಿಗಳು ಆಸ್ಪತ್ರೆ ಕೇಳಿದ ಪ್ರಮಾಣದ ಔಷಧಿಗಳನ್ನು ಸರಬರಾಜು ಮಾಡುತ್ತಿಲ್ಲ. ಇದರಿಂದ ಕಳೆದ ಐದು ತಿಂಗಳಿನಿಂದ ಔಷಧಿಗಳ ಕೊರತೆ ಉಂಟಾಗಿದ್ದು, ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಜನಔಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಜೊತೆ ಇರುವ ಕುಟುಂಬ ಸದಸ್ಯರಿಗೂ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಪೇಷೆಂಟ್‌ಗಳಿಗೆ ಆಹಾರದ ವ್ಯವಸ್ಥೆ ಇದ್ದರೂ, ಅವರ ಜೊತೆ ಇರುವವರಿಗೆ ಕ್ಯಾಂಟೀನ್ ಸೌಲಭ್ಯ ಇಲ್ಲದ ಕಾರಣ ರೋಗಿಯನ್ನು ಬಿಟ್ಟು ಹೊರಗಡೆ ಹೋಗಿ ಊಟ ಮಾಡಿ ಬರುವ ಅನಿವಾರ್ಯತೆ ಎದುರಾಗುತ್ತಿದೆ.
ಜನರ ಆರೋಗ್ಯದ ಕೇಂದ್ರವಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹ ಸಮಸ್ಯೆಗಳು ಮುಂದುವರಿಯುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾ ಆಸ್ಪತ್ರೆ ಶೀಘ್ರ ಉದ್ಘಾಟನೆಗೊಂಡು ಜನಸಾಮಾನ್ಯರಿಗೆ ಲಭ್ಯವಾದರೆ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚುವುದರ ಜೊತೆಗೆ ಸಿಬ್ಬಂದಿ, ಔಷಧಿ ಮತ್ತು ಮೂಲಸೌಕರ್ಯ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ವ್ಯಕ್ತವಾಗಿದೆ.
ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ನೂತನ ಜಿಲ್ಲಾ ಆಸ್ಪತ್ರೆಯ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು ಎನ್ನುವುದು ಜನರ ಹಾಗೂ Public Next ಕಾಳಜಿಯಾಗಿದೆ.
PublicNext
28/05/2026 06:09 pm