ಧಾರವಾಡ: ಹೌದು.. ಪ್ರತಿವರ್ಷ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಗೆ ಹೊಂದಿಕೊಂಡ ಹನುಮನಕೊಪ್ಪ ಗ್ರಾಮದ ಗ್ರಾಮಸ್ಥರು ನಡೆಸಿಕೊಂಡು ಬಂದಿರುವ ಬೊಂಬೆ ಭವಿಷ್ಯ ಮತ್ತೆ ನಿಜವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪದತ್ಯಾಗ ಆಗಬಹುದು ಎಂದು ಈ ವರ್ಷದ ಯುಗಾದಿ ಪಾಡ್ಯಮಿಯಂದು ಹಾಕಲಾಗಿದ್ದ ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಇದೀಗ ಸಿಎಂ ಸಿದ್ದರಾಮಯ್ಯ ಅವರು ಖುರ್ಚಿ ಬಿಟ್ಟು ಕೆಳಗಿಳಿದಿದ್ದಾರೆ.
ಯುಗಾದಿ ಅಮವಾಸ್ಯೆಯಂದು ಪೂರ್ವಕ್ಕೆ ಹರಿಯುವ ಹಳ್ಳದಲ್ಲಿ ಹನುಮನಕೊಪ್ಪ ಗ್ರಾಮದ ಹಿರಿಯರು ಫಲ ಹಾಕಿ ಬರುತ್ತಾರೆ. ಮಣ್ಣಿನಿಂದ ಗದ್ದುಗೆ ನಿರ್ಮಾಣ ಮಾಡಿ ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಆಕೃತಿ, ಸೈನಿಕರ ಆಕೃತಿ, ರೈತರ ಆಕೃತಿ ಸೇರಿದಂತೆ ಮಳೆಯ ಹೆಸರಿನಲ್ಲಿ ಧಾನ್ಯ ಹಾಗೂ ಅನ್ನದ ಉಂಡೆಗಳನ್ನು ಇಟ್ಟು ಬರುತ್ತಾರೆ.
ಮಾರನೇ ದಿನ ಬೆಳಿಗ್ಗೆ ಬಂದು ಫಲವನ್ನು ನೋಡುತ್ತಾರೆ ಯಾವ್ಯಾವ ಮೂರ್ತಿಗಳಿಗೆ ಪೆಟ್ಟಾಗಿದೆ? ಅನ್ನದ ಉಂಡೆ ಹೇಗಿದೆ? ಮಳೆ, ಬೆಳೆ ಹೇಗಿದೆ ಎಂಬುದನ್ನು ನೋಡಿ ಅದರ ಮೇಲೆ ಭವಿಷ್ಯ ನಿರ್ಧಾರ ಮಾಡುತ್ತಾರೆ. ಈ ಹಿಂದೆ ಇಂದಿರಾ ಗಾಂಧಿ ಹತ್ಯೆಯಾದಾಗ ರಾಷ್ಟ್ರಮಟ್ಟದ ನಾಯಕರ ಬೊಂಬೆಗೆ ಪೆಟ್ಟಾಗಿತ್ತು. ಯಡಿಯೂರಪ್ಪ ಖುರ್ಚಿ ಬಿಟ್ಟು ಕೆಳಗಿಳಿಯುವಾಗ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿತ್ತು. ಮಳೆ, ಬೆಳೆ ಸಹ ಈ ಬೊಂಬೆ ನುಡಿದ ಭವಿಷ್ಯದಂತೆಯೇ ಆಗಿತ್ತು.
ಈ ವರ್ಷ ಕರ್ನಾಟಕದ ದಿಕ್ಕಿನ ಬೊಂಬೆಗೆ ಪೆಟ್ಟಾಗಿದ್ದು, ಸಿಎಂ ಸಿದ್ದರಾಮಯ್ಯ ಖುರ್ಚಿ ಬಿಟ್ಟು ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ ಎಂದು ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಎಂ ಖುರ್ಚಿಯಿಂದ ಕೆಳಗಿಳಿದಿದ್ದಾರೆ.
ಪ್ರತಿವರ್ಷ ಹನುಮನಕೊಪ್ಪದ ಗ್ರಾಮಸ್ಥರು ಈ ಫಲ ಹಾಕುವ ಪದ್ಧತಿ ನಡೆಸಿಕೊಂಡು ಬಂದಿದ್ದು, ಈ ಬೊಂಬೆ ಭವಿಷ್ಯ ಭಾಗಶಃ ನಿಜವಾಗುತ್ತಲೇ ಬಂದಿದೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಎಂದರೆ ಇದೀಗ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟು ಕೆಳಗಿಳಿದಿದ್ದು.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/05/2026 07:46 pm