ನವದೆಹಲಿ : ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರ ಸಾರ್ವಜನಿಕ ನಡವಳಿಕೆಗೆ ಸಂಬಂಧಿಸಿದಂತೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಯೊಂದು ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ, ವಿಯೆಟ್ನಾಂ ವಿಮಾನ ನಿಲ್ದಾಣದ ಟಾರ್ಮ್ಯಾಕ್ (ವಿಮಾನಗಳು ನಿಲ್ಲುವ ಪ್ರದೇಶ) ಮೇಲೆ ಭಾರತೀಯ ಪ್ರವಾಸಿಗರ ಗುಂಪೊಂದು ಅನಿರೀಕ್ಷಿತವಾಗಿ 'ಗರ್ಬಾ' ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿರುವುದು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ತೀವ್ರ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ, ವಿಯೆಟ್‌ಜೆಟ್ ಏರ್‌ಲೈನ್ಸ್ ವಿಮಾನದ ಪಕ್ಕದಲ್ಲೇ ಪ್ರವಾಸಿಗರು ವೃತ್ತಾಕಾರವಾಗಿ ನಿಂತು ಅತ್ಯಂತ ಉತ್ಸಾಹದಿಂದ ಸಾಂಪ್ರದಾಯಿಕ ಗರ್ಬಾ ಹೆಜ್ಜೆಗಳನ್ನು ಹಾಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇತರ ಪ್ರಯಾಣಿಕರು ವಿಮಾನದತ್ತ ಸಾಗುತ್ತಿರುವಾಗಲೇ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದ ರನ್‌ವೇ ಅಥವಾ ಟಾರ್ಮ್ಯಾಕ್ ಪ್ರದೇಶಗಳು ಅತ್ಯಂತ ಸುರಕ್ಷಿತ ಹಾಗೂ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡುವ ವಲಯಗಳಾಗಿವೆ. ಇಂತಹ ಸೂಕ್ಷ್ಮ ವಾತಾವರಣದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವುದು ಸುರಕ್ಷತೆಯ ದೃಷ್ಟಿಯಿಂದ ತಪ್ಪು ಎಂಬುದು ಬಹುತೇಕ ನೆಟ್ಟಿಗರ ಅಭಿಪ್ರಾಯ. "ಇಂತಹ ಘಟನೆಗಳು ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತವೆ ಮತ್ತು ದೇಶದ ಗೌರವಕ್ಕೆ ಧಕ್ಕೆ ತರುತ್ತವೆ" ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಕೆಲವರು ಈ ನಡೆಗೆ ಬೆಂಬಲ ಸೂಚಿಸಿದ್ದು, "ಇದು ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರದರ್ಶನ. ಇದರಲ್ಲಿ ಯಾರಿಗೆ ತೊಂದರೆಯಾಗಿದೆ?" ಎಂದು ಪ್ರಶ್ನಿಸುವ ಮೂಲಕ ಪ್ರವಾಸಿಗರನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ, ಈ ವಿಡಿಯೋ ವಿದೇಶಗಳಲ್ಲಿ ಭಾರತೀಯರ ಪ್ರವಾಸದ ಶಿಸ್ತು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ನಡವಳಿಕೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
PublicNext
30/05/2026 03:32 pm