ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ಅನ್ಮೋಲ್ ಸಿಂಗ್ ಎಂಬುವವರ ನಾಲ್ಕು ವರ್ಷದ ಪುತ್ರ ಅನುಭವ್ ಸಿಂಗ್, ಶನಿವಾರ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.
ಸಾಗರ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಪ್ರಾಣ ಉಳಿಸಲು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅದಕ್ಕೆ ಭಾರಿ ಪ್ರಮಾಣದ ಹಣದ ಅವಶ್ಯಕತೆಯಿತ್ತು. ಬಡ ಕೂಲಿ ಕಾರ್ಮಿಕನಿಗೆ ಈ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿ ಎದುರಾಗಿತ್ತು.
ಮಗುವಿನ ಈ ಕಷ್ಟದ ಪರಿಸ್ಥಿತಿಯನ್ನು ಅರಿತ ಮುಷಾಹಿದ್ ಮತ್ತು ಅವರ ಸ್ನೇಹಿತರ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಾರ್ವಜನಿಕರಲ್ಲಿ ಹಾಗೂ ದಾನಿಗಳಲ್ಲಿ ಧನಸಹಾಯ ಮಾಡುವಂತೆ ಮಾನವೀಯ ಕರೆ ನೀಡಿದ್ದರು. ಈ ಕರೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಹಲವು ಸಹೃದಯಿ ದಾನಿಗಳು ತಮ್ಮ ಕೈಲಾದ ಆರ್ಥಿಕ ನೆರವನ್ನು ಮುಷಾಹಿದ್ ತಂಡದ ಮೂಲಕ ಹರಿಸಿದ್ದಾರೆ. ಹೀಗೆ ಸಂಗ್ರಹವಾದ ಚಿಕಿತ್ಸಾ ಧನವನ್ನು ಪ್ರಮುಖ ಉದ್ಯಮಿ ರಫೀಕ್ ಅವರ ನೇತೃತ್ವದಲ್ಲಿ ಆಸ್ಪತ್ರೆಗೆ ತಲುಪಿಸಿ ಮಗುವಿನ ಶಸ್ತ್ರಚಿಕಿತ್ಸೆಗೆ ನೆರವಾಗಲಾಗಿದೆ. ಸಂಕಷ್ಟದ ಸಮಯದಲ್ಲಿ ದೇವದೂತರಂತೆ ಬಂದು ಮಗುವಿನ ಜೀವ ಉಳಿಸಲು ಸಹಕರಿಸಿದ ಎಲ್ಲಾ ದಾನಿಗಳಿಗೆ ಮುಷಾಹಿದ್ ಮತ್ತು ತಂಡದವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದು, ಬಾಲಕ ಅನುಭವ್ ಸಿಂಗ್ ಶೀಘ್ರವಾಗಿ ಗುಣಮುಖನಾಗಿ ಮನೆಗೆ ಮರಳಲಿ ಎಂದು ಆಶಿಸಿದ್ದಾರೆ.
ಜಮೀಲ್ ಸಾಗರ್ "ಪಬ್ಲಿಕ್ ನೆಕ್ಸ್ಟ್ ಸಾಗರ"
Kshetra Samachara
30/05/2026 09:44 pm