ಬಂಟ್ವಾಳ: ಬಿಯರ್ ಬಾಟಲಿಯಿಂದ ಚುಚ್ಚಿ ಚಿಕ್ಕಪ್ಪನನ್ನೇ ಯುವಕನೋರ್ವನು ಕೊಲೆಗೈದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ಸಂಭವಿಸಿದೆ.ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ನಿವಾಸಿ ಮಧುಸೂದನ (38) ಕೊಲೆಯಾದವರು.
ಮೃತಪಟ್ಟವರ ಅಣ್ಣನ ಪುತ್ರ ರಾಹುಲ್ (23) ಕೊಲೆಗೈದ ಆರೋಪಿ. ಕೇಶವ ಪೂಜಾರಿಯವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು. ಇದನ್ನು ಮಧುಸೂದನ್ ಅವರು ಆಕ್ಷೇಪಿಸಿದ್ದರು.
ಇದರಿಂದ ಕೆರಳಿದ ರಾಹುಲ್ ಬೀಯರ್ ಬಾಟಲಿಯಿಂದ ಅವರ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ಅವಿವಾಹಿತರಾಗಿದ್ದು, ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ರಾಹುಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದ್ದು, ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಂಜಾ ಸೇವನೆಯಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪರಾರಿಯಾಗಿದ್ದ ಆರೋಪಿ ಆ ಬಳಿಕ ಪುಂಜಾಲಕಟ್ಟೆ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
PublicNext
01/06/2026 02:55 pm
LOADING...