ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮನೆಯಲ್ಲೇ ಕಂಟ್ರಿ ಪಿಸ್ತೂಲ್ ತಯಾರಿ! ಬುಕ್ ಸ್ಟಾಲ್‌ನಲ್ಲಿ ಮದ್ದು-ಗುಂಡು ಮಾರಾಟ, 13 ಬಂದಿ ಬಂಧನ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಟಗಾಳಿ ಗ್ರಾಮದಲ್ಲಿ ಕಂಟ್ರಿ ಪಿಸ್ತೂಲ್‌ ತಯಾರಿಸಿ ಮಾರುತ್ತಿದ್ದ ಜಾಲವನ್ನು ಪತ್ತೆ ಮಾಡಿದ ಪೊಲೀಸರು 13 ಆರೋಪಿಗಳನ್ನು ಬಂಧಿಸಿ, 9 ಕಂಟ್ರಿ ಪಿಸ್ತೂಲ್‌ಗಳು, ಜೀವಂತ ಗುಂಡುಗಳು, ಮದ್ದು ಹಾಗೂ ವಿವಿಧ ತಯಾರಿಕಾ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಟಗಾಳಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕಂಟ್ರಿ ಪಿಸ್ತೂಲು ತಯಾರಕರು, ಖರೀದಿದಾರರು, ಮದ್ದು–ಗುಂಡು ಪೂರೈಸಿದವರು ಮತ್ತು ಬಂದೂಕಿನ ಬ್ಯಾರೆಲ್‌ಗಳಿಗೆ ವೆಲ್ಡಿಂಗ್ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನೂ ಏಕಕಾಲಕ್ಕೆ ಬಂಧಿಸಲಾಗಿದೆ ಎಂದರು.

‘ಕಾಟಗಾಳಿ ಗ್ರಾಮದ ಮಾರುತಿ ಶ್ರೀಕಾಂತ್ ಸುತಾರ 2024ರಿಂದ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರ ತಯಾರಿಸಿ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದ. ಸುತಾರನನ್ನು ಮೇ 11ರಂದು ಬಂಧಿಸಿದ ಪೊಲೀಸರು, ತನಿಖೆ ವಿಸ್ತರಿಸಿದಾಗ ಜಾಲ ಬಯಲಾಯಿತು. ಈ ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದ ಮತ್ತೊಬ್ಬ ಆರೋಪಿಯನ್ನು ಸಹ ಬಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಪಿಸ್ತೂಲಿನ ಬಿಡಿಭಾಗಗಳು ಹಾಗೂ ಮದ್ದು– ಗುಂಡುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಬಂಧನದ ವೇಳೆ 21 ಗನ್ ಭಾಗಗಳು, 5 ಹೆಡ್‌ಗಳು, 15 ನಿಪ್ಪಲ್‌ಗಳು, ಸೀಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೆಟ್‌ಗಳು, 449 ಸೀಸದ ಗೋಲಿಗಳು, 420 ಕೇಪ್‌ಗಳು ಹಾಗೂ 48 ಜೀವಂತ ಕಾಡತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ವಿವರಿಸಿದರು.

‘ಬೆಳಗಾವಿ ನಗರದಲ್ಲಿದ್ದ ಗನ್‌ಶಾಪ್‌ನ ಪರವಾನಗಿ ಅವಧಿ 2021ರಲ್ಲೇ ಮುಕ್ತಾಯಗೊಂಡಿದ್ದರೂ ಅಂಗಡಿಯಲ್ಲಿ ಉಳಿದಿದ್ದ ಮದ್ದು– ಗುಂಡುಗಳು ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗಿತ್ತು. ಆ ಅಂಗಡಿ ಮಾಲೀಕರನ್ನೂ ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಮುಂದುವರಿದಿದೆ’ ಎಂದರು.

ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ಖಾನಾಪುರ ಇನ್‌ಸ್ಪೆಕ್ಟರ್ ಎಲ್.ಎಚ್. ಗೌಂಡಿ ಹಾಗೂ ಸಿಬ್ಬಂದಿ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿತು ಎಂದು ಶ್ಲಾಘಿಸಿದರು. ಖಾನಾಪುರ ತಾಲೂಕಿನ ಮಾರುತಿ ಶ್ರೀಕಾಂತ ಸುತಾರ, ಸೋಮನಾಥ ಪಲ್ಲಾದ ಚೌಗುಲೆ, ಸಂತೋಷ ಶಿವಾಜಿ ನಾಯಕ, ಮಾರುತಿ ಯಲ್ಲಪ್ಪ ಗುಡದ್ಯಾಗೋಳ, ಬಾಳು ಭರಮಾಣಿ ನಾಯಕ, ಬೆಳಗಾವಿ ಮಾರ್ಕಂಡೇಯ ನಗರದ ಲಕ್ಷ್ಮಣ ಬಾಲಪ್ಪ ಗುಜನಾಳ, ಮೋದೆಕೊಪ್ಪ ಗ್ರಾಮದ ಬಸವರಾಜ ಗಂಗಪ್ಪ ಸಾಲೋಟಗಿ, ಬಸವಂತ ಭರಮಾಣಿ ಯರಮಾಳಕರ, ಲಕ್ಷ್ಮಣ ಈಶ್ವರ ಗುರವ, ಕಾಳೇನಟ್ಟಿ ಗ್ರಾಮದ ಆರೋಪಿ ಮರಿಯಪ್ಪ ನಿಂಗಪ್ಪ ನಾಯಕ, ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ವಿಶ್ವನಾಥ ಸೀತಾರಾಮ ದೇಸಾಯಿ, ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಮಹೇಶ ಮಾರುತಿ ಲಕ್ಕೇಬೈಲಕರ ಎಂಬಾತರನ್ನು ಬಂಧಿಸಲಾಗಿದೆ.

Edited By : Somashekar
PublicNext

PublicNext

01/06/2026 03:43 pm

Cinque Terre

7.79 K

Cinque Terre

0

ಸಂಬಂಧಿತ ಸುದ್ದಿ