ಉಡುಪಿ; ಜಿಲ್ಲೆಯಲ್ಲಿ ಮಳೆಗಾಲ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿದ್ದರೂ, ಜಿಲ್ಲೆಯಲ್ಲಿ ಅಗತ್ಯ ಮಳೆಗಾಲದ ಪೂರ್ವಸಿದ್ಧತಾ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಗಳನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದು, ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಚರಂಡಿಗಳು ಮತ್ತು ನೀರು ಹರಿಯುವ ತೋಡುಗಳು ಸ್ವಚ್ಛಗೊಳಿಸದೆ ಬಿಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ರಸ್ತೆಗಳ ಎರಡೂ ಬದಿಯಲ್ಲಿರುವ ಚರಂಡಿಗಳು ಹೂಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗಿಡಗಂಟೆಗಳಿಂದ ಮುಚ್ಚಿಹೋಗಿವೆ. ಪರಿಣಾಮವಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಜಿಲ್ಲೆಯ ಪ್ರಮುಖ ನೀರು ಹರಿವಿನ ಮಾರ್ಗವಾದ ಇಂದ್ರಾಣಿ ನದಿಯಲ್ಲಿ ಹೂಳು ತುಂಬಿಕೊಂಡಿದ್ದು, ಪ್ಲಾಸ್ಟಿಕ್ ಕಸ, ಮರದ ಕೊಂಬೆಗಳು ಹಾಗೂ ವಿವಿಧ ತ್ಯಾಜ್ಯಗಳು ಸೇರಿ ಹಲವೆಡೆ ನೀರಿನ ಹರಿವಿಗೆ ಅಡ್ಡಿಯಾಗಿವೆ.
ತಜ್ಞರ ಪ್ರಕಾರ ಮಳೆಗಾಲ ಆರಂಭವಾದ ನಂತರ ಇಂತಹ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಕಷ್ಟಸಾಧ್ಯ. ಈಗಲೇ ನದಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿದರೆ ಮುಂಬರುವ ಪ್ರವಾಹದ ಅಪಾಯವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಬಹುದಾಗಿದೆ.
ಕೊಡಂಕೂರು, ತಾರೆಕಟ್ಟೆ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ಪ್ರತಿವರ್ಷ ಮಳೆ ಬಂದಾಗ ನೆರೆ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಕಳೆದ ವರ್ಷ ನಗರಸಭೆ ವತಿಯಿಂದ ಕೆಲವು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು.
ಆದರೆ ಈ ಬಾರಿ ಹಲವೆಡೆ ಹೂಳು ತುಂಬಿಕೊಂಡಿದ್ದು, ಗಿಡಗಂಟೆಗಳು ಬೆಳೆದು ನೀರು ಹರಿಯಲು ಸ್ಥಳವೇ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದರ ಜೊತೆಗೆ ಕೆಲವು ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳೂ ವರದಿಯಾಗುತ್ತಿವೆ. ಚರಂಡಿಯ ಕೊಳಚೆ ನೀರು ನೇರವಾಗಿ ಜನರ ಮನೆಗಳ ಮುಂಭಾಗಕ್ಕೆ ಹರಿಯುತ್ತಿದ್ದು, ದುರ್ವಾಸನೆಯ ನಡುವೆಯೇ ಮಕ್ಕಳು ಮತ್ತು ನಿವಾಸಿಗಳು ದಿನನಿತ್ಯ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾರ್ವಜನಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಳೆಗಾಲ ಮತ್ತಷ್ಟು ತೀವ್ರಗೊಳ್ಳುವ ಮುನ್ನವೇ ಜಿಲ್ಲಾಡಳಿತ, ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಇಂದ್ರಾಣಿ ನದಿ, ಚರಂಡಿಗಳು ಮತ್ತು ನೀರು ಹರಿಯುವ ತೋಡುಗಳನ್ನು ತುರ್ತಾಗಿ ಸ್ವಚ್ಛಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಡುಪಿ ಜಿಲ್ಲೆಗೆ ಇಂದ್ರಾಣಿ ನದಿ ಪ್ರವಾಹದ ರೂಪದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.
PublicNext
02/06/2026 03:45 pm