ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಾಕೃತಿಕ ವಿಕೋಪ ಎದುರಿಸಲು ದ.ಕ ಜಿಲ್ಲೆ ಸನ್ನದ್ಧ- ತಹಶೀಲ್ದಾರ್ ಹಂತದಲ್ಲಿ ತುರ್ತು ಪರಿಹಾರಕ್ಕೆ 3.25 ಕೋಟಿ ಲಭ್ಯ - ಡಿಸಿ

ಮಂಗಳೂರು: ಕರಾವಳಿಗೆ ಜೂನ್ 4ರಿಂದ ಮುಂಗಾರು ಪ್ರವೇಶವಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಕೃತಕ ನೆರೆ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪದ ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ.

ಪಡೀಲ್‌ನ ಪ್ರಜಾಸೌಧದಲ್ಲಿ ಮಾಹಿತಿ ನೀಡಿದ ಅವರು, ದ.ಕ. ಜಿಲ್ಲೆಯಲ್ಲಿ ಒಟ್ಟು 115ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ತಹಶೀಲ್ದಾರ್ ಹಂತದಲ್ಲಿ ವಿವಿಧ ತಾಲೂಕುಗಳಲ್ಲಿ ತುರ್ತು ಪರಿಹಾರ ಕ್ರಮಗಳಿಗಾಗಿ ಜಿಲ್ಲೆಯಲ್ಲಿ ಒಟ್ಟು 3.25 ಕೋಟಿ ರೂ. ಲಭ್ಯ ಇದ್ದು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.

ಮುಂಗಾರು ಸಂದರ್ಭ ರಾತ್ರಿ ವೇಳೆ ಪ್ರಾಕೃತಿಕ ವಿಕೋಪಗಳಾದ ಸಂದರ್ಭ ಅಧಿಕಾರಿಗಳು ದೂರವಾಣಿ ಕರೆ ಎತ್ತುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ 24X7 ಮೊಬೈಲ್ ಕರೆಗಳನ್ನು ಡೈವರ್ಟ್ ಮಾಡುವ ಸೂಚನೆಯನ್ನು ನೀಡಲಾಗಿದೆ. ಕರೆ ಬಂದಾಗ ಅದನ್ನು ಸ್ವೀಕರಿಸಿ ತಕ್ಷಣ ಸಂಬಂಧಪಟ್ಟವರಿಗೆ ಸಂದೇಶ ಕಳುಹಿಸುವ ರೀತಿಯ ಪ್ರಯೋಗವನ್ನು ಮಾಡಲಾಗುತ್ತಿದೆ ಎಂದವರು ತಿಳಿಸಿದರು.

ಪಾಲಿಕೆಯ 60 ವಾರ್ಡ್‌ಗಳಿಗೆ ಇಂಜಿನಿಯರ್ ಗಳನ್ನು, 223 ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒಗಳು, 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳಾಗಿ ನೇಮಕ ಮಾಡಲಾಗಿದೆ. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಳಗೆ ನಿರಂತರ 25 ಸಿಬ್ಬಂದಿಯನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡ ಪುತ್ತೂರು ತಾಲೂಕಿನಲ್ಲಿ ನಿಯೋಜಿಸಲಾಗಿದೆ, 10 ಸಿಬ್ಬಂದಿಯ ಎನ್‌ಡಿಆರ್‌ಎಫ್ ತಂಡವನ್ನು ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು 28 ಬೋಟ್ ಕಟ್ಟರ್, ಲೈಫ್ ಜಾಕೆಟ್, ಜೀವ ರಕ್ಷಕರು, ಜೆಸಿಬಿ ಯಂತ್ರ, ಟಿಪ್ಪರ್, ಕ್ರೇನ್ ಗಳನ್ನು ಸಿದ್ಧಗೊಳಿಸಲಾಗಿದೆ. ಸಂಭಾವ್ಯ ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಸರ್ವ ಸನ್ನದ್ಧವಾಗಿರಬೇಕಾಗಿರುವ ಹಿನ್ನೆಲೆಯಲ್ಲಿ ಸದರಿ ಪ್ರದೇಶಗಳಲ್ಲಿ ಅಗತ್ಯ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ವಿವಿಧ ಇಲಾಖೆಯವರು ಸನ್ನದ್ಧವಾಗಿಡಲು ಸೂಚಿಸಲಾಗಿದೆ.

Edited By : Shivu K
PublicNext

PublicNext

02/06/2026 03:35 pm

Cinque Terre

11.48 K

Cinque Terre

0

ಸಂಬಂಧಿತ ಸುದ್ದಿ