ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಪಾಯದ ಮಟ್ಟದಲ್ಲಿ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್- ಆತಂಕದಲ್ಲಿ‌ ಕಂದಾವರ ಗ್ರಾಮದ ಜನತೆ

ಮಂಗಳೂರು: ನಗರದ ಗುರುಪುರ ಬಳಿಯ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲುಪೇಟೆ ಮಸೀದಿಗೆ ಹತ್ತಿರದಲ್ಲಿ ಪರಂಬೋಕು ತೋಡಿನ ಹೂಳೆತ್ತುವ ಸಂದರ್ಭ ಮಂಗಳೂರಿನಿಂದ ಹಾಸನಕ್ಕೆ ಹಾದು ಹೋಗಿರುವ ಎಚ್‌ಪಿಸಿಎಲ್‌ನ ಎಲ್‌ಪಿಜಿ ಗ್ಯಾಸ್ ಪೂರೈಕೆಯ ಪೈಪ್‌ಲೈನ್ ಮೇಲ್ಮಟ್ಟದಲ್ಲಿ ಅಪಾಯದ ಮಟ್ಟದಲ್ಲಿರುವುದು ಬೆಳಕಿಗೆ ಬಂದಿದೆ.

ಬೈಲುಪೇಟೆ ಮಸೀದಿ ಮೂಲಕ ಫಲ್ಗುಣಿ ನದಿ ಸೇರುವ ಬೃಹತ್ ಪರಂಬೋಕು ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿತ್ತು. ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಎಂಬುವರು ಸ್ವಯಂಪ್ರೇರಿತರಾಗಿ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಹೂಳೆತ್ತುವ ಕಾರ್ಯ ನಡೆಸಿದ್ದಾರೆ. ಈ ವೇಳೆ ತೋಡಿನೊಳಗೆ ಅತಿ ಮೇಲ್ಮಟ್ಟದಲ್ಲಿ ಹಾದು ಹೋಗಿರುವ ಪೈಪ್‌ಲೈನ್‌ಗೆ ಹಾನಿಯುಂಟಾಗಿದೆ. ಈ ಸಂದರ್ಭ ಎಚ್‌ಪಿಸಿಎಲ್ ಪೈಪ್‌ಲೈನ್ ಭೂಮಿಯ ಮೇಲ್ಭಾಗದಲ್ಲಿ(ಎರಡುವರೆ ಅಡಿ ಆಳ) ಹಾದು ಹೋಗಿರುವುದು ಬೆಳಕಿಗೆ ಬಂದಿದೆ.

ಇಲ್ಲೇ ಸನಿಹದಲ್ಲಿ ಗೈಲ್ ಕಂಪೆನಿಯ ಪೈಪ್‌ಲೈನ್ ಭೂಮಿಯಲ್ಲಿ 10 ಅಡಿ ಆಳದಲ್ಲಿ ಹಾದು ಹೋಗಿದೆ. ಎಚ್‌ಪಿಸಿಎಲ್ ಪೈಪ್‌ಲೈನ್ ಹತ್ತಿರದಲ್ಲೇ ಇರುವ ಪೆಟ್ರೋನೆಟ್ ಕಂಪನಿಯ ಡೀಸೆಲ್ ಪೂರೈಕೆ ಪೈಪ್‌ಲೈನ್ ಕೂಡಾ ಆಳದಲ್ಲಿದೆ. ಆದರೆ ಎಚ್‌ಪಿಸಿಎಲ್ ಪೈಪ್‌ಲೈನ್ ಕೇವಲ ಎರಡೂವರೆ ಅಡಿ ಆಳದಲ್ಲಿರುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಆದ್ಯಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ದೊಡ್ಡ ಪರಂಬೋಕು ತೋಡು ಇದಾಗಿದ್ದು, ಇದರಲ್ಲಿ ಮೂರು ಗ್ರಾಮಗಳ ನೀರು ಹರಿಯುತ್ತದೆ. ಕೃಷಿ ಪ್ರದೇಶವಾದ ಇಲ್ಲಿ ರೈತರು, ಗ್ರಾಮಸ್ಥರು ಮತ್ತು ಪಂಚಾಯತ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಖಾಸಗಿ ಕಂಪನಿಗಳು ಏಕಾಏಕಿಯಾಗಿ ಯೋಜನೆ ಜಾರಿಗೊಳಿಸಿದರೆ ಭವಿಷ್ಯದಲ್ಲಿ ಅನಾಹುತ ಖಚಿತ. ಗ್ಯಾಸ್, ಪೆಟ್ರೋಲ್‌ನಂತಹ ಯೋಜನೆಯ ಕಾರ್ಯಗತದ ವೇಳೆ ನಿರ್ದಿಷ್ಟ ಮಾನದಂಡ ಹಾಗೂ ಸಂಪೂರ್ಣ ಸುರಕ್ಷತಾ ಕ್ರಮ ನಿರ್ಲಕ್ಷಿಸುವಂತಿಲ್ಲ.‌ ಆದ್ದರಿಂದ ಬೈಲುಪೇಟೆಯಲ್ಲಿ ಗ್ಯಾಸ್ ಪೈಪ್‌ಲೈನ್ ಕನಿಷ್ಠ 10ಅಡಿ ಆಳದಲ್ಲಿ ಹಾದು ಹೋಗಬೇಕು. ಈ ಬಗ್ಗೆ ಶೀಘ್ರ ಕ್ರಮ ಜರುಗಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಕಂದಾವರ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ. ಸುವರ್ಣ ಎಚ್ಚರಿಸಿದ್ದಾರೆ.

ಮುಂದಿನ ಬೇಸಿಗೆಯಲ್ಲಿ ಕಂಪೆನಿಯು 10 ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಕೆಯೊಂದಿಗೆ ಸಿಮೆಂಟ್ ಹಾಸು ಸುರಕ್ಷತೆ ಒದಗಿಸಬೇಕು'' ಎಂದು ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.

Edited By :
PublicNext

PublicNext

03/06/2026 07:19 pm

Cinque Terre

9.48 K

Cinque Terre

0

ಸಂಬಂಧಿತ ಸುದ್ದಿ