ಚೆನ್ನೈ: ನಾವು ಪ್ರತಿದಿನ ಆಟೋಗಳಲ್ಲಿ ಪ್ರಯಾಣಿಸುತ್ತೇವೆ, ಮೀಟರ್‌ಗಿಂತ ಜಾಸ್ತಿ ಹಣ ಕೇಳುವ ಅಥವಾ ಉದ್ಧಟತನದಿಂದ ವರ್ತಿಸುವ ಡ್ರೈವರ್‌ಗಳನ್ನು ನೋಡಿರುತ್ತೇವೆ. ಆದರೆ ತಮಿಳುನಾಡಿನ ಚೆನ್ನೈನಲ್ಲಿ ಮಹಿಳೆಯೊಬ್ಬರಿಗೆ ಎದುರಾದ ಆಟೋ ಚಾಲಕ ಮಾತ್ರ ಇಡೀ ಜಗತ್ತೇ ಅವರ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ! ಮೊದಲ ನೋಟಕ್ಕೆ ಸಾಮಾನ್ಯ ಆಟೋ ಚಾಲಕನಂತೆ ಕಾಣುವ ಈ ವ್ಯಕ್ತಿ, ಬರೋಬ್ಬರಿ 7 ಬಾರಿ ‘ಟೆಡ್‌ಎಕ್ಸ್’ (TEDx) ವೇದಿಕೆ ಏರಿದ್ದಾರೆ ಹಾಗೂ ಗೂಗಲ್, ಮೈಕ್ರೋಸಾಫ್ಟ್‌ನಂತಹ ಜಾಗತಿಕ ಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸ ನೀಡಿದ್ದಾರೆ ಎಂದರೆ ನೀವು ನಂಬಲೇಬೇಕು!
ಧರಣಿ ಎಂಬ ವೈದ್ಯೆ ತಮಗೆ ಎದುರಾದ ಈ ರೋಮಾಂಚನಕಾರಿ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆ ಅದ್ಭುತ ಆಟೋ ಚಾಲಕನ ಹೆಸರು ಅಣ್ಣಾದೊರೈ.
ಧರಣಿ ಅವರು ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿ ಅಣ್ಣಾದೊರೈ ಅವರ ಶೇರಿಂಗ್ ಆಟೋ ಹತ್ತಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅದು ಕೇವಲ ಆಟೋ ಆಗಿರದೆ, ಒಂದು ಸುಸಜ್ಜಿತ ಮಿನಿ ಆಫೀಸ್‌ನಂತಿತ್ತು! ಆಟೋ ಒಳಗಿದ್ದ ಸೌಲಭ್ಯಗಳು ಹೀಗಿದ್ದವು:
ಫ್ರಂಟ್‌ಲೈನ್, ಫೆಮಿನಾ, ಔಟ್‌ಲುಕ್‌ನಂತಹ ಪ್ರಮುಖ ಮ್ಯಾಗಜೀನ್‌ಗಳು ಮತ್ತು ದಿನಪತ್ರಿಕೆಗಳು. ಯುಪಿಎಸ್‌ಸಿ (UPSC) ಪರೀಕ್ಷೆಗೆ ತಯಾರಿ ನಡೆಸುವವರಿಗಾಗಿ ವಿಶೇಷ ಸ್ಟಡಿ ಮೆಟೀರಿಯಲ್ಸ್! ಪ್ರಯಾಣಿಕರ ಬಳಕೆಗೆ ಉಚಿತ ವೈಫೈ (Wi-Fi) ಮತ್ತು ಆಪಲ್ ಐಪ್ಯಾಡ್ (iPads). ಪ್ರಯಾಣಿಕರು ಕುಡಿಯಲು ಮಿನಿ ಕೂಲರ್ ಹಾಗೂ ಫ್ಲಾಸ್ಕ್‌ನಲ್ಲಿ ಬಿಸಿಬಿಸಿ ಕಾಫಿ! ಇದರ ಜೊತೆಗೆ ಉಚಿತ ಚಾಕೊಲೇಟ್‌ಗಳು ಮತ್ತು ಮಳೆ ಬಂದರೆ ಬಳಸಲು ಕೊಡೆಗಳು (Umbrellas).
ಇಷ್ಟೇ ಅಲ್ಲದೆ, ಈ ಅಣ್ಣಾದೊರೈ ಅವರಿಗೆ ಬರೋಬ್ಬರಿ 7 ಭಾಷೆಗಳು ಗೊತ್ತು! ಪ್ರಯಾಣಿಕರ ಜೊತೆ ಜೋರಾಗಿ ನಗುತ್ತಾ, ಖುಷಿಯಿಂದ ಡಾನ್ಸ್ ಮಾಡುತ್ತಾ ಸವಾರಿ ಮಾಡುವುದು ಇವರ ಸ್ಟೈಲ್.
ಅಣ್ಣಾದೊರೈ ಅವರ ಆಟೋದಲ್ಲಿ ಒಂದು ವಿಶೇಷ ಬೋರ್ಡ್ ಇತ್ತು. ಸಮಾಜಕ್ಕೆ ಸೇವೆ ಸಲ್ಲಿಸುವ ವೈದ್ಯರು, ನರ್ಸ್‌ಗಳು, ಶಿಕ್ಷಕರು ಮತ್ತು ಪೌರಕಾರ್ಮಿಕರಿಗೆ ನನ್ನ ಆಟೋದಲ್ಲಿ ಪ್ರಯಾಣ ಸಂಪೂರ್ಣ ಉಚಿತ ಎಂದು ಅದರಲ್ಲಿ ಬರೆಯಲಾಗಿತ್ತು.
ಪ್ರಯಾಣದ ಕೊನೆಯಲ್ಲಿ ಧರಣಿ ಅವರು ತಾವು ವೃತ್ತಿಯಿಂದ ಶಿಕ್ಷಕಿ ಮತ್ತು ವೈದ್ಯೆ ಎಂದು ಹೇಳಿದಾಗ, ಅಣ್ಣಾದೊರೈ ಅವರು ತಮ್ಮ ನಿಯಮದಂತೆ ಆಕೆಯಿಂದ ನಯಾಪೈಸೆ ಹಣವನ್ನೂ ಪಡೆಯದೆ ಗೌರವ ಸಲ್ಲಿಸಿದ್ದಾರೆ.
ಪ್ರಯಾಣ ಮುಗಿಯುವ ಹೊತ್ತಿಗೆ ಆಟೋದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಅಣ್ಣಾದೊರೈ ಅವರನ್ನು ಗುರುತಿಸಿ, "ನಮ್ಮ ಕಾಲೇಜು ಕಾರ್ಯಕ್ರಮಕ್ಕೆ ನಿಮ್ಮನ್ನು ಮುಖ್ಯ ಅತಿಥಿಯಾಗಿ ಕರೆದಿದ್ದೆವು" ಎಂದು ನೆನಪಿಸಿಕೊಂಡಿದ್ದಾರೆ. ಇದನ್ನ ಕೇಳಿ ಧರಣಿ ಆಶ್ಚರ್ಯಪಟ್ಟು ಅಣ್ಣಾದೊರೈ ಜೊತೆ ಮಾತನಾಡಿದಾಗ ಅಸಲಿ ವಿಷಯ ಗೊತ್ತಾಗಿದೆ. ಈ ಆಟೋ ಡ್ರೈವರ್ ಬಿಜಿನೆಸ್ ಮ್ಯಾನೇಜ್‌ಮೆಂಟ್, ಗ್ರಾಹಕ ಸೇವೆ (Customer Service) ಮತ್ತು ಉದ್ಯಮಶೀಲತೆ ಬಗ್ಗೆ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಪಾಠ ಮಾಡುವ ಅಂತರರಾಷ್ಟ್ರೀಯ ಮಟ್ಟದ ಮೋಟಿವೇಷನಲ್ ಸ್ಪೀಕರ್!
ಯಾವುದೇ ಕೆಲಸ ಚಿಕ್ಕದಲ್ಲ, ನಾವು ಮಾಡುವ ಕೆಲಸಕ್ಕೆ ತೋರುವ ನಿಷ್ಠೆ ಮತ್ತು ಪ್ರೀತಿ ನಮ್ಮನ್ನು ಜಗತ್ತಿನ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಅಣ್ಣಾದೊರೈ ಅವರೇ ಜೀವಂತ ಉದಾಹರಣೆ.
PublicNext
02/06/2026 10:47 pm