ಪ್ಯಾರಿಸ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಮತ್ತು ಜನಪ್ರಿಯತೆ ಗಳಿಸಬೇಕು ಎಂಬ ಉದ್ದೇಶದಿಂದ ರೀಲ್ಸ್ ಹಾಗೂ ವಿಡಿಯೊ ಶೂಟ್‌ಗಳಲ್ಲಿ ಸಮಯ ಕಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಮ್ಮೆ ಅಸಭ್ಯ ಅಥವಾ ವಿಚಿತ್ರ ವರ್ತನೆಗಳು ಕೂಡ ಇದಕ್ಕೆ ಕಾರಣವಾಗುತ್ತವೆ. ಆದರೆ, ಈ ನಡುವೆ ಭಾರತೀಯ ಮಹಿಳೆಯರ ವಿಡಿಯೊವೊಂದು ಎಲ್ಲರ ಗಮನ ಸೆಳೆದಿದೆ.
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಭಾರತೀಯ ಮಹಿಳೆಯರು ಸೀರೆ ಉಟ್ಟು ಮಾಡಿದ ರ‍್ಯಾಂಪ್ ವಾಕ್ ವಿಡಿಯೊ ವೈರಲ್ ಆಗಿದ್ದು, ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಕ್ಕಾಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ನೆಟ್ಟಿಗರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ನೃತ್ಯ ಮಾಡುವ ಅಥವಾ ವಿಚಿತ್ರ ವರ್ತನೆ ತೋರುವ ಬದಲು ಇಂತಹ ಘಟನೆಗಳೇ ಶ್ಲಾಘನೀಯ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಈ ಮಹಿಳೆಯರು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಮಧ್ಯ ವಯಸ್ಕ ಭಾರತೀಯ ಮಹಿಳೆಯರ ಗುಂಪೊಂದು ಬಣ್ಣ ಬಣ್ಣದ ಸೀರೆಗಳನ್ನು ಉಟ್ಟು, ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಾ, ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ನಿಯಮಗಳನ್ನು ಉಲ್ಲಂಘಿಸದೆ ಅಥವಾ ತಮ್ಮ ಸುತ್ತಲಿನ ಇತರರಿಗೆ ತೊಂದರೆ ನೀಡದೆ, ಅತ್ಯಂತ ಶಿಸ್ತಿನಿಂದ ಈ ಫೋಟೊಶೂಟ್ ನಡೆಸಿದ್ದಾರೆ. ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಇಷ್ಟು ಸುಂದರವಾಗಿ ಪ್ರದರ್ಶಿಸಿರುವುದು ಹಲವರ ಪ್ರಶಂಸೆಗೆ ಪಾತ್ರವಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವ ಬದಲು ಇಂತಹ ಘಟನೆಗಳು ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೊವನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು, ಈ ಕ್ಷಣವನ್ನು ತಮಾಷೆಯಾಗಿ "ಪ್ಯಾರಿಸ್ ಫ್ಯಾಷನ್ ವೀಕ್" ಎಂದು ಬಣ್ಣಿಸಿದ್ದಾರೆ. "ನಾನು ಈ ಮಹಿಳೆಯರನ್ನು ಅಪಹಾಸ್ಯ ಮಾಡುವುದಿಲ್ಲ. ಅವರು ಭಾರತೀಯ ಸಂಸ್ಕೃತಿಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ" ಎಂದು ಒಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ವಿಚಿತ್ರವಾಗಿ ಡ್ಯಾನ್ಸ್ ಮಾಡಿ ಜನರಿಗೆ ತೊಂದರೆ ಉಂಟು ಮಾಡುವ ರೀಲ್ಸ್‌ಗಿಂತ ಇದೇ ಉತ್ತಮ" ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ, ಈ ವಿಡಿಯೊ ಭಾರತೀಯ ಸಂಸ್ಕೃತಿಯ ಘನತೆ ಮತ್ತು ಸೌಂದರ್ಯವನ್ನು ಎತ್ತಿ ಹಿಡಿದಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.
PublicNext
03/06/2026 07:47 pm