ಕಾಗವಾಡ: ಈ ದೃಶ್ಯ ನೋಡಿದರೆ ಯಾರ ಕಣ್ಣಲ್ಲಾದರೂ ನೀರು ಬರುವುದು ಸಹಜ. ಇಡೀ ಮನುಕುಲವೇ ಮಮ್ಮಲ ಮರುಗುವಂತಹ ಕಥೆಯಿದು. ಕಳೆದ ಹತ್ತು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಯುವತಿಯೊಬ್ಬಳಿಗೆ ಕೊನೆಗೂ ಆ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಯುವತಿಯೊಬ್ಬಳ ಬದುಕು ಕಳೆದ ಒಂದು ದಶಕದಿಂದ ಕತ್ತಲ ಕೋಣೆಗೆ ತಳ್ಳಲ್ಪಟ್ಟಿತ್ತು. ಇಂದು 27 ವರ್ಷದ ಯುವತಿಯಾಗಿರುವ ಆಕೆ, 17ನೇ ವಯಸ್ಸಿನಲ್ಲಿ ಪಿಯುಸಿ ಓದುತ್ತಿದ್ದಾಗ ಜ್ವರ ಬಂದಿದೆ ಎಂದು ಮನೆಗೆ ಬಂದಿದ್ದಳು. ಆರಂಭದಲ್ಲಿ ಇದು ಸಾಮಾನ್ಯ ಜ್ವರ ಎಂದುಕೊಂಡ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಆದರೆ, ಜ್ವರ ಕಡಿಮೆಯಾಗಲಿಲ್ಲ. ಬದಲಿಗೆ ದಿನಗಳು ಕಳೆದಂತೆ ಆಕೆಯ ವರ್ತನೆಯಲ್ಲಿ ತೀವ್ರ ಬದಲಾವಣೆಗಳು ಕಾಣಿಸತೊಡಗಿದವು.
ಹಿಂಸಾತ್ಮಕ ವರ್ತನೆಗೆ ತಿರುಗಿದ ಬಾಳು!
ಆರಂಭದಲ್ಲಿ ಮೌನಕ್ಕೆ ಶರಣಾದ ಯುವತಿ, ದಿನ ಕಳೆದಂತೆ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದಳು. ಕ್ರಮೇಣ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ ಆಕೆ, ಯಾರ ಮಾತನ್ನೂ ಕೇಳದ ಸ್ಥಿತಿಗೆ ತಲುಪಿದಳು. ಮಗಳನ್ನು ಗುಣಪಡಿಸಲು ಆಸ್ಪತ್ರೆಗಳು, ವೈದ್ಯರು, ಮಠ-ಮಂದಿರಗಳು, ಹರಕೆ-ಹೂಡೆಗಳು... ಹೀಗೆ ಪೋಷಕರು ಮಾಡದ ಪ್ರಯತ್ನಗಳೇ ಇಲ್ಲ. ಆದರೆ ಎಲ್ಲವೂ ವ್ಯರ್ಥವಾದಾಗ ಕುಟುಂಬ ಸಂಪೂರ್ಣವಾಗಿ ಧೈರ್ಯ ಕಳೆದುಕೊಂಡಿತು. ಒಂದೆಡೆ ಕಾಯಿಲೆಯ ತೀವ್ರತೆ, ಇನ್ನೊಂದೆಡೆ ವಿಪರೀತ ಕೋಪದಿಂದಾಗಿ ಆಕೆ ಮನೆಯ ಕಿಟಕಿ, ಗಾಜು ಹಾಗೂ ವಸ್ತುಗಳನ್ನು ಪುಡಿಪುಡಿ ಮಾಡುತ್ತಿದ್ದಳು. ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಪರಿಸ್ಥಿತಿ ಕೈಮೀರಿ ಹೋದಾಗ, ಬೇರೆ ದಾರಿಯಿಲ್ಲದೆ ಕುಟುಂಬದವರು ಆಕೆಯ ಕಾಲಿಗೆ ಸರಪಳಿ ಕಟ್ಟುವ ಅನಿವಾರ್ಯತೆಗೆ ಒಳಗಾದರು.
ಹತ್ತು ವರ್ಷಗಳ ನರಕಯಾತನೆ
ಹೀಗೆ ಕಳೆದ ಹತ್ತು ವರ್ಷಗಳಿಂದ ಮನೆಯ ಒಂದು ಮೂಲೆಯಲ್ಲಿ ಸರಪಳಿಯಿಂದ ಬಂಧಿಯಾಗಿ ಬದುಕು ಸಾಗಿಸುತ್ತಿದ್ದ ಆಕೆ, ಜೀವಂತವಾಗಿದ್ದರೂ ಜೈಲಿನ ಕೈದಿಯಂತಾಗಿದ್ದಳು. ಆದರೆ, ಇಂದು ಆ ಕರುಣಾಜನಕ ದೃಶ್ಯ ಸಂಪೂರ್ಣವಾಗಿ ಬದಲಾಗಿದೆ!
ಕಾಲಿಗೆ ಸರಪಳಿ ಬಿಗಿದು, ಕತ್ತಲಲ್ಲಿ ಮೌನವಾಗಿ ಕುಳಿತುಕೊಳ್ಳುತ್ತಿದ್ದ ಯುವತಿ ಇಂದು ಮನೆಯ ಅಂಗಳದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾಳೆ. ಯಾರನ್ನೂ ಕಣ್ಣೆತ್ತಿ ನೋಡದಿದ್ದ ಮುಖದಲ್ಲಿ ಈಗ ನಿಷ್ಕಲ್ಮಶ ನಗು ಅರಳಿದೆ. ಮನೆಯವರ ಜೊತೆ ಪ್ರೀತಿಯಿಂದ ಮಾತನಾಡುತ್ತಿದ್ದಾಳೆ. ಆಕೆಯ ಬದುಕಿನಲ್ಲಿ ಮತ್ತೆ ಭರವಸೆಯ ಕಿರಣ ಮೂಡಿದೆ. ಈ ಮಹತ್ತರ ಬದಲಾವಣೆಗೆ ಕಾರಣವಾಗಿದ್ದು ಮಾತ್ರ 'ಪಬ್ಲಿಕ್ ನೆಕ್ಸ್ಟ್' ಮಾಧ್ಯಮದ ಒಂದು ವಿಶೇಷ ವರದಿ!
ಕತ್ತಲ ಬದುಕಿಗೆ ಬೆಳಕಾದ 'ಪಬ್ಲಿಕ್ ನೆಕ್ಸ್ಟ್'
'ಪಬ್ಲಿಕ್ ನೆಕ್ಸ್ಟ್' ತಂಡವು ಈ ಯುವತಿಯ ಕಣ್ಣೀರ ಕಥೆಯನ್ನು ಸಮಾಜದ ಮುಂದೆ ತಂದಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿದರು. ಯುವತಿಗೆ ಸೂಕ್ತ ಮಾನಸಿಕ ಹಾಗೂ ದೈಹಿಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ವೈದ್ಯರ ಸತತ ಪ್ರಯತ್ನದ ಫಲವಾಗಿ ಆಕೆ ಈಗ ಸಂಪೂರ್ಣ ಗುಣಮುಖಳಾಗಿ ಮನೆಗೆ ಮರಳಿದ್ದಾಳೆ.
ಹತ್ತು ವರ್ಷಗಳ ಸುದೀರ್ಘ ಕತ್ತಲೆಯ ಬಳಿಕ ಈ ಯುವತಿಯ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಮೊಳೆ ಗ್ರಾಮದ ಈ ಯುವತಿಯ ಕಥೆ ಇಂದು ಕೇವಲ ಒಂದು ಸುದ್ದಿಯಲ್ಲ, ಬದಲಿಗೆ ಮಾಧ್ಯಮದ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯ ಗೆಲುವಿನ ಯಶೋಗಾಥೆಯಾಗಿದೆ.
- ಲಕ್ಷ್ಮಣ ಕೋಳಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕೋಡಿ
PublicNext
07/06/2026 08:40 pm