ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಗಜಸಿಂಗ್‌ಪುರ ಪ್ರದೇಶದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಪುಟ್ಟ ಮಗುವನ್ನು ಬೀದಿನಾಯಿಯೊಂದು ಎಳೆದೊಯ್ಯಲು ಯತ್ನಿಸಿದ ಘಟನೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಗು ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಹೌದು ಸ್ಥಳೀಯ ನಿವಾಸಿಗಳ ಪ್ರಕಾರ, ಮಗು ತನ್ನ ಮನೆಯ ಹೊರಗೆ ಆಟವಾಡುತ್ತಾ ಕುಳಿತಿದ್ದಾಗ ಹತ್ತಾರು ಬೀದಿನಾಯಿ ಏಕಾಏಕಿ ಮುಗಿಬಿದ್ದಿದೆ. ನಾಯಿ ಮಗುವನ್ನು ಕಚ್ಚಿ ಎಳೆದೊಯ್ಯಲು ಯತ್ನಿಸಿದ್ದು, ಈ ಭೀಕರ ದಾಳಿಯಿಂದ ಕಂಗಾಲಾದ ಮಗು ಜೋರಾಗಿ ಕಿರುಚಾಡಲು ಪ್ರಾರಂಭಿಸಿದೆ. ಮಗುವಿನ ಆಕ್ರಂದನ ಮತ್ತು ಕಿರುಚಾಟದ ಧ್ವನಿ ಕೇಳಿದ ತಕ್ಷಣ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪಾದಚಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಾಯಿ ಕಲ್ಲು ತೂರಿಮಗುವನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಾರ್ವಜನಿಕರು ಬರುವುದು ಕೆಲವೇ ಸೆಕೆಂಡುಗಳು ತಡವಾಗಿದ್ದರೂ ಮಗುವಿನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು.
ಈ ದಿಗಿಲು ಹುಟ್ಟಿಸುವ ಘಟನೆಯು ಗಜಸಿಂಗ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಸ್ಥಳೀಯ ಆಡಳಿತ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಗಜಸಿಂಗ್‌ಪುರ ಸುತ್ತಮುತ್ತ ಇಂತಹ ಹತ್ತಾರು ಭೀಕರ ಬೀದಿನಾಯಿ ದಾಳಿಗಳು ನಡೆದಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇದರಿಂದಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳು ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೀದಿನಾಯಿಗಳ ಸಂತತಿಯನ್ನು ನಿಯಂತ್ರಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುನ್ಸಿಪಲ್ ಅಧಿಕಾರಿಗಳು ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೀದಿನಾಯಿಗಳ ಹಾವಳಿ ಕೇವಲ ಶ್ರೀ ಗಂಗಾನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶದ ಹಲವು ಭಾಗಗಳಲ್ಲಿ ಇದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ, ಸಣ್ಣ ಮಕ್ಕಳನ್ನು ಮನೆಯ ಹೊರಗೆ ಒಂಟಿಯಾಗಿ ಬಿಡುವ ಮುನ್ನ ಪೋಷಕರು ಹೆಚ್ಚಿನ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
PublicNext
19/06/2026 07:37 pm