ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಯಾದ 1.5 ತಿಂಗಳಲ್ಲೇ ನವವಧು ಆತ್ಮಹತ್ಯೆ - ವರದಕ್ಷಿಣೆ ಕಿರುಕುಳ, ಸಿಸಿಟಿವಿ ಕಣ್ಗಾವಲಿಟ್ಟಿದ್ದ ವೈದ್ಯ ಪತಿ.!

ಮುಂಬೈ: ಮಹಾರಾಷ್ಟ್ರದ ಅಂಬರನಾಥ್‌ನಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಪತಿಯ ವಿಕೃತ ವರ್ತನೆಗೆ ಬೇಸತ್ತು ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮದುವೆಯಾದ ಕೇವಲ ಒಂದೂವರೆ ತಿಂಗಳಲ್ಲೇ 26 ವರ್ಷದ ವಿಶಾಖಾ ತಿಲ್ಕರ್ ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವೈದ್ಯ ಪತಿ ಹಾಗೂ ಆತನ ಕುಟುಂಬಸ್ಥರೇ ಈ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮೃತ ವಿಶಾಖಾ ಅವರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪತಿ ಡಾ. ನಿತಿನ್ ತಿಲ್ಕರ್, ಅತ್ತೆ ಛಾಯಾ ತಿಲ್ಕರ್ ಮತ್ತು ಮೈದುನ ನಿನಾದ್ ತಿಲ್ಕರ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಬುಧವಾರ ಮೂವರನ್ನೂ ಬಂಧಿಸಲಾಗಿದೆ.

ಕಳೆದ ಏಪ್ರಿಲ್ 30 ರಂದು ಡಾ. ನಿತಿನ್ ಜೊತೆ ವಿಶಾಖಾ ಅವರ ವಿವಾಹ ನಡೆದಿತ್ತು. ಮದುವೆಗೂ ಮುನ್ನ ಎಲ್ಲವೂ ಸುಗಮವಾಗಿತ್ತು. ಆದರೆ, ಮದುವೆಯಾಗಿ ಮನೆಗೆ ಬಂದ ಕೆಲವೇ ದಿನಗಳಲ್ಲಿ ಹೆಚ್ಚುವರಿ ಚಿನ್ನಾಭರಣ ಹಾಗೂ ನಗದಿಗೆ ಬೇಡಿಕೆಯಿಟ್ಟು ವಿಶಾಖಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಮದುವೆಯಾಗಿ ಕೇವಲ ಒಂದೂವರೆ ತಿಂಗಳಾಗಿದ್ದ ಯುವತಿಯ ಆತ್ಮಹತ್ಯೆ ಪ್ರಕರಣದಲ್ಲಿ, ವರದಕ್ಷಿಣೆ ಕಿರುಕುಳದ ಜೊತೆಗೆ ವೈದ್ಯ ಪತಿ ತನ್ನ ಹೆಂಡತಿಯ ಪ್ರತಿಯೊಂದು ಚಲನವಲನವನ್ನು ಮನೆಯೊಳಗೆ ಮತ್ತು ಹೊರಗೆ ಸಿಸಿಟಿವಿ ಕಣ್ಗಾವಲಿನಲ್ಲಿಟ್ಟು ವಿಕೃತವಾಗಿ ಹಿಂಸಿಸುತ್ತಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ವೈದ್ಯ ಡಾ. ನಿತಿನ್, ವಿಶಾಖಾ ದಿನವಿಡೀ ಏನು ಮಾಡುತ್ತಿದ್ದಾಳೆ ಎಂಬುದನ್ನು ಸಿಸಿಟಿವಿ ಮೂಲಕ ನಿರಂತರವಾಗಿ ಕಣ್ಗಾವಲಿಟ್ಟು ವೀಕ್ಷಿಸುತ್ತಿದ್ದನು. ನೆರೆಹೊರೆಯವರೊಂದಿಗೆ ಮಾತನಾಡಿದರೆ ಆಕೆಯನ್ನು ಪ್ರಶ್ನಿಸಿ, ಮನಬಂದಂತೆ ಥಳಿಸುತ್ತಿದ್ದನು ಎನ್ನಲಾಗಿದೆ. ಸಾವು ಸಂಭವಿಸುವ ಕೇವಲ ಎರಡು ದಿನಗಳ ಮುನ್ನವೂ ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕೆ ವಿಶಾಖಾ ಮೇಲೆ ಪತಿ ಹಲ್ಲೆ ನಡೆಸಿದ್ದನು. ಈ ಭೀಕರ ಕಿರುಕುಳದ ಬಗ್ಗೆ ವಿಶಾಖಾ ತನ್ನ ತಾಯಿಗೆ ಫೋನ್ ಮಾಡಿ ಅಳಲು ತೋಡಿಕೊಂಡಿದ್ದರು. ಪೋಷಕರು ಆಕೆಯನ್ನು ತವರಿಗೆ ಕರೆತರಲು ಯೋಜಿಸುವಷ್ಟರಲ್ಲೇ ಮಂಗಳವಾರ ಆಕೆ ಶವವಾಗಿ ಪತ್ತೆಯಾಗಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮನೆಯೊಳಗೆ ಸಿಸಿಟಿವಿ ಅಳವಡಿಸಿ ಪತ್ನಿಯ ಮೇಲೆ ನಿಗಾ ಇಟ್ಟಿರುವುದು ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ನಿರೀಕ್ಷಕ ರಮೇಶ್ ಪಾಟೀಲ್ ತಿಳಿಸಿದ್ದಾರೆ. ಪೊಲೀಸರು ಈ ಕೌಟುಂಬಿಕ ಹಿಂಸಾಚಾರದ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದು, ಸತ್ಯಾಂಶವನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ.

Edited By : Vijay Kumar
PublicNext

PublicNext

19/06/2026 06:32 pm

Cinque Terre

4.63 K

Cinque Terre

0

ಸಂಬಂಧಿತ ಸುದ್ದಿ