ಸೀತಾಮಢಿ (ಬಿಹಾರ): ಸಂಪೂರ್ಣ ಮದ್ಯಪಾನ ನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಜಿಲ್ಲೆಯ ಬೋಖ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಬುಧನಗರ ಸೇತುವೆ ಬಳಿ ಮದ್ಯ ತುಂಬಿದ್ದ ಲಾರಿಯೊಂದನ್ನು ಕಂಡ ತಕ್ಷಣ, ಗ್ರಾಮಸ್ಥರು ಮುಗಿಬಿದ್ದು ಮದ್ಯದ ಬಾಕ್ಸ್‌ಗಳನ್ನು ಲೂಟಿ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯೊಂದು ವಿವಿಧ ಬ್ರಾಂಡ್‌ಗಳ ಮದ್ಯ ಹಾಗೂ ಬೀರ್ ಕಾರ್ಟನ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿತ್ತು. ಈ ಲಾರಿ ಸೇತುವೆ ಬಳಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು, ಅದರಲ್ಲಿ ಮದ್ಯ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಅಷ್ಟೇ, ಕ್ಷಣಾರ್ಧದಲ್ಲಿ ಜಮಾಯಿಸಿದ ನೂರಾರು ಜನ ಲಾರಿಯೊಳಗೆ ನುಗ್ಗಿದ್ದಾರೆ. ಯುವಕರು, ಮಹಿಳೆಯರು ಹಾಗೂ ಸಣ್ಣ ಮಕ್ಕಳು ಎನ್ನದೆ ಸಿಕ್ಕಸಿಕ್ಕ ಮದ್ಯದ ಬಾಕ್ಸ್‌ಗಳನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಪೊಲೀಸರ ಸೈರನ್ ಸದ್ದು ಕೇಳುತ್ತಿದ್ದಂತೆ ಲೂಟಿಕೋರರೆಲ್ಲಾ ಮದ್ಯದ ಬಾಕ್ಸ್ ಸಹಿತ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಸಾರ್ವಜನಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಮದ್ಯದ ಲೂಟಿ ನಡೆದಿರುವುದು ನಿಷೇಧದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಘಟನೆಯನ್ನು ಖಚಿತಪಡಿಸಿರುವ ಪುಪ್ರಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಸುನಿತಾ ಕುಮಾರಿ ಅವರು, "ಹಿಮಾಚಲ ಪ್ರದೇಶದ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಗೌಪ್ಯ ಮಾಹಿತಿ ನಮಗೆ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ನಮ್ಮ ಅಧಿಕಾರಿಗಳು ಬುಧನಗರ ಸೇತುವೆ ಬಳಿ ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ," ಎಂದು ತಿಳಿಸಿದ್ದಾರೆ.
ಸದ್ಯ ಲಾರಿಯನ್ನು ಪೊಲೀಸ್ ಠಾಣೆಗೆ ತರಲಾಗಿದ್ದು, ಅದರಲ್ಲಿ ಇನ್ನು ಎಷ್ಟು ಲೀಟರ್ ಮತ್ತು ಎಷ್ಟು ಕಾರ್ಟನ್ ಮದ್ಯ ಬಾಕಿ ಉಳಿದಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
PublicNext
19/06/2026 07:18 pm