ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIRAL : ಅದ್ಧೂರಿ ಉದ್ಘಾಟನೆ ಬಳಿಕ ನವಿ ಮುಂಬೈ ಏರ್‌ಪೋರ್ಟ್‌ನಲ್ಲಿ ನೀರು ಸೋರಿಕೆ - 'ವಿಕಸಿತ ಭಾರತ'ದ ಸಂಕೇತಕ್ಕೆ ಮುಜುಗರ!

ಮುಂಬೈ: ₹19,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿಯಿಂದ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭವ್ಯ ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಈ ಹೊಸ ವಿಮಾನಯಾನ ಕೇಂದ್ರದ ಮೂಲಸೌಕರ್ಯದ ಗುಣಮಟ್ಟದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಹೆಚ್ಚು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ಸಾಮಾನು ಸಾಗಿಸುವ ಬೆಲ್ಟ್‌ಗಳ 5 ಮತ್ತು 6ರ ಬಳಿ ಛಾವಣಿಯಿಂದ ನೀರು ಸೋರುತ್ತಿರೋದು ಸ್ಪಷ್ಟವಾಗಿ ಸೆರೆಯಾಗಿದೆ. ಮಳೆಗಾಲ ಆರಂಭದ ಬೆನ್ನಲ್ಲೆ ಈ ಘಟನೆ ವಿಮಾನ ನಿಲ್ದಾಣದ ನಿರ್ಮಾಣ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ NMIA ಅಧಿಕಾರಿಗಳು, ಇದು ಛಾವಣಿಯಿಂದಾದ ಸೋರಿಕೆಯಲ್ಲ ಬದಲಿಗೆ ಹವಾನಿಯಂತ್ರಣ (AC) ನಾಳದಿಂದ ಉಂಟಾದ ಸಮಸ್ಯೆ ಎಂದು ತಿಳಿಸಿದ್ದಾರೆ.

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹೊರಡಿಸಿದ ಅಧಿಕೃತ ಹೇಳಿಕೆಯ ಪ್ರಕಾರ, ಜೂನ್ 17ರಂದು ಸಾಮಾನು ಸಾಗಿಸುವ ಬೆಲ್ಟ್‌ಗಳ ಬಳಿ ನೀರು ಸೋರಿಕೆ ಬಗ್ಗೆ ಗಮನಿಸಲಾಯಿತು.

ತಕ್ಷಣವೇ ಟರ್ಮಿನಲ್ ಕಾರ್ಯಾಚರಣೆ ತಂಡವು ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಂಡು, ಸೋರಿಕೆಯನ್ನು 1 ಗಂಟೆಯೊಳಗೆ ಸರಿಪಡಿಸಲಾಯ್ತು ಎಂದು ತಿಳಿಸಲಾಗಿದೆ. ಆದಾಗ್ಯೂ, ವೈರಲ್ ಆದ ಈ ವಿಡಿಯೋವು ಗುಣಮಟ್ಟ ನಿಯಂತ್ರಣ, ನಿರ್ವಹಣಾ ಮಾನದಂಡಗಳು ಮತ್ತು ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳಲ್ಲಿನ ಹೊಣೆಗಾರಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕ ಚರ್ಚೆ

ಈ ವಿವಾದವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದ್ರೆ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವಿಮಾನ ಸಂಪರ್ಕವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ವದ ಮೂಲಸೌಕರ್ಯ ಯೋಜನೆಯಾಗಿ ಪರಿಗಣಿಸಲಾಗಿದೆ.

ಪ್ರಧಾನಿ ಮೋದಿ ಅವರು ಅಕ್ಟೋಬರ್ 2025 ರಲ್ಲಿ ಇದನ್ನು ಬಹಳ ಅದ್ದೂರಿಯಾಗಿ ಉದ್ಘಾಟಿಸಿದ್ದರು. ಸುಮಾರು ₹19,650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ವಿಮಾನಯಾನ ಕ್ಷೇತ್ರವನ್ನು ಬೆಂಬಲಿಸುವ ಪ್ರಮುಖ ಹೆಬ್ಬಾಗಿಲಾಗಿ ಕಲ್ಪಿಸಲಾಗಿತ್ತು.

Edited By : Abhishek Kamoji
PublicNext

PublicNext

19/06/2026 08:24 pm

Cinque Terre

8.26 K

Cinque Terre

0

ಸಂಬಂಧಿತ ಸುದ್ದಿ