ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಡಿಕಲ್ ಕಾಲೇಜಿನಲ್ಲಿ ಜೂನಿಯರ್ಸ್‌ಗೆ ರ‍್ಯಾಗಿಂಗ್‌ ಕಾಟ: 6 ಜನ ಸೀನಿಯರ್ ಡಾಕ್ಟರ್ಸ್ ಅಮಾನತು, ಹಾಸ್ಟೆಲ್‌ನಿಂದ ಗೇಟ್‌ಪಾಸ್!

ಭಾವನಗರ (ಗುಜರಾತ್): ವೈದ್ಯಕೀಯ ಲೋಕದಲ್ಲಿ ಭವಿಷ್ಯದ ಜೀವರಕ್ಷಕರಾಗಬೇಕಾದ ಸೀನಿಯರ್ ವೈದ್ಯರೇ ಜೂನಿಯರ್ ವಿದ್ಯಾರ್ಥಿಗಳಿಗೆ ನರಕಯಾತನೆ ನೀಡಿದ ಆಘಾತಕಾರಿ ಘಟನೆ ಗುಜರಾತ್‌ನ ಭಾವನಗರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಜೂನಿಯರ್ ವಿದ್ಯಾರ್ಥಿಗಳಿಗೆ ಕ್ರೂರವಾಗಿ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ಆರು ಮಂದಿ ಹಿರಿಯ ವೈದ್ಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿದೆ.

ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ತಕ್ಷಣ ಆಂಟಿ ರ‍್ಯಾಗಿಂಗ್ ಸಮಿತಿಯು ಸುದೀರ್ಘ ತನಿಖೆ ಆರಂಭಿಸಿತ್ತು. ಬರೋಬ್ಬರಿ 8.5 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯಲ್ಲಿ, 13 ವೈದ್ಯಕೀಯ ವಿದ್ಯಾರ್ಥಿಗಳ ದೂರುಗಳನ್ನು ಪರಿಶೀಲಿಸಲಾಯಿತು. ಅಲ್ಲದೆ, ಮೂರನೇ ವರ್ಷದ ರೆಸಿಡೆಂಟ್ (R3) ವೈದ್ಯರು ಹಾಗೂ ಕಾಲೇಜಿನ ಸಿಬ್ಬಂದಿ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಂಡು ಆರು ಮಂದಿ ಹಿರಿಯ ವೈದ್ಯರು ತಪ್ಪಿತಸ್ಥರು ಎಂದು ಸಮಿತಿ ವರದಿ ನೀಡಿದೆ.

ರ‍್ಯಾಗಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಬ್ಬ ಆರೋಪಿಯನ್ನು ಕಾಲೇಜಿನ ಎಲ್ಲಾ ಶೈಕ್ಷಣಿಕ, ಕ್ಲಿನಿಕಲ್ ಮತ್ತು ಸಂಶೋಧನಾ ಚಟುವಟಿಕೆಗಳಿಂದ 2 ವರ್ಷಗಳ ಕಾಲ ದೂರ ಇಡಲಾಗಿದೆ. ಮೂವರು ಸೀನಿಯರ್ ವೈದ್ಯರನ್ನು ಒಂದು ವರ್ಷದ ಅವಧಿಗೆ ಸಸ್ಪೆಂಡ್ ಮಾಡಲಾಗಿದೆ. ಉಳಿದ ಇಬ್ಬರು ವೈದ್ಯರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥ ಆರೂ ಜನ ವೈದ್ಯರನ್ನು ತಕ್ಷಣವೇ ಹಾಸ್ಟೆಲ್ ಕೊಠಡಿ ಖಾಲಿ ಮಾಡುವಂತೆ ಆದೇಶಿಸಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನಿಯಮಾವಳಿಗಳ ಅನ್ವಯ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪಂಶೇರಿಯಾ ಅವರು ಈ ಬಗ್ಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಸರ್ಕಾರವು ರ‍್ಯಾಗಿಂಗ್ ವಿರುದ್ಧ 'ಜೀರೋ ಟಾಲರೆನ್ಸ್' (ಶೂನ್ಯ ಸಹನೆ) ನೀತಿಯನ್ನು ಹೊಂದಿದೆ. ಇಂತಹ ಅಸಹಜ, ಅಮಾನವೀಯ ಮತ್ತು ಶಿಸ್ತುಬಾಹಿರ ಕೃತ್ಯಗಳನ್ನು ಯಾವುದೇ ಮೆಡಿಕಲ್ ಕಾಲೇಜುಗಳಲ್ಲಿ ಸಹಿಸುವುದಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತಂದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ," ಎಂದು ಸಚಿವರು ಎಚ್ಚರಿಸಿದ್ದಾರೆ.

Edited By : Nagaraj Tulugeri
PublicNext

PublicNext

19/06/2026 07:26 pm

Cinque Terre

8.28 K

Cinque Terre

0

ಸಂಬಂಧಿತ ಸುದ್ದಿ