ಗುವಾಹಟಿ: ರೈಲ್ವೆ ಇಂಜಿನ್‌ನಿಂದ ವ್ಯಕ್ತಿಯೊಬ್ಬ ಪೈಪ್ ಹಾಕಿ ಪ್ಲಾಸ್ಟಿಕ್ ಕವರ್‌ಗೆ ಡೀಸೆಲ್ ಕದಿಯುತ್ತಿರುವ ದಿಗಿಲು ಹುಟ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಬಿಹಾರದ ಸೀತಾಮಢಿ ಜಿಲ್ಲೆಯಲ್ಲಿ ನಡೆದಿದೆ ಎಂದು ನೆಟ್ಟಿಗರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದರು. ಆದರೆ, ಈ ವೈರಲ್ ವಿಡಿಯೋದ ಬೆನ್ನತ್ತಿದ ರೈಲ್ವೆ ಇಲಾಖೆ ಇದೀಗ ಅಸಲಿ ಸತ್ಯವನ್ನು ಬಹಿರಂಗಪಡಿಸಿದೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಿಂತಿರುವ ರೈಲಿನ ಇಂಜಿನ್ ಇಂಧನ ಟ್ಯಾಂಕ್‌ಗೆ ಪೈಪ್ ಹಾಕಿ ಯಾವುದೇ ಭಯವಿಲ್ಲದೆ ಡೀಸೆಲ್ ಕದಿಯುತ್ತಿರುವುದು ಕಂಡುಬಂದಿದೆ. ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹಲವರು ಈ ವಿಡಿಯೋ ಹಾಕಿ ಆಕ್ರೋಶ ಹೊರಹಾಕಿದ್ದರು. ಆದರೆ, ಈ ವಿಡಿಯೋಗೂ ಬಿಹಾರಕ್ಕೂ ಯಾವುದೇ ಸಂಬಂಧವಿಲ್ಲ, ಇದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಘಟನೆ ಎಂದು ಈಶಾನ್ಯ ಗಡಿ ರೈಲ್ವೆ (NFR) ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಹಳೆಯ ಅಥವಾ ಬೇರೆ ಕಡೆಯ ವಿಡಿಯೋಗಳನ್ನು ತಪ್ಪು ಸ್ಥಳದ ಹೆಸರಿನೊಂದಿಗೆ ಹಂಚಿಕೊಂಡು ದಿಕ್ಕು ತಪ್ಪಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ರೈಲಿನ ಪವರ್ ಕಾರ್‌ನಿಂದ ಡೀಸೆಲ್ ಕಳ್ಳತನವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ರೈಲ್ವೆ ರಕ್ಷಣಾ ಪಡೆ (RPF) ತಕ್ಷಣವೇ ಕಾರ್ಯಾಚರಣೆ ನಡೆಸಿತ್ತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಳ್ಳತನದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಆರ್‌ಪಿಎಫ್ ಅಧಿಕಾರಿಗಳು ಸ್ಥಳದಲ್ಲೇ ಬಂಧಿಸಿದ್ದಾರೆ. ಬಂಧಿತರಿಂದ ಕದ್ದಿದ್ದ 25 ಲೀಟರ್ ಡೀಸೆಲ್ ಆಯಿಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ನಾಲ್ಕೂ ಜನ ಆರೋಪಿಗಳನ್ನು ಗುವಾಹಟಿಯ ಸಮರ್ಥ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಹಾರದ ಕಳ್ಳತನದ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಹಾದಿ ತಪ್ಪಿಸುವಂತದ್ದಾಗಿದೆ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
PublicNext
19/06/2026 07:10 pm