ಖಾನಾಪುರ: ಸಾರ್ವಜನಿಕರ ಸಮಸ್ಯೆಯನ್ನು ಬೆಳಕಿಗೆ ತಂದ ಮಾಧ್ಯಮ ವರದಿಯ ಫಲವಾಗಿ ಖಾನಾಪುರ ತಾಲೂಕಿನ ಗಣೇಬೈಲ, ಹತ್ತರಗುಂಜಿ, ಮುಡೇವಾಡಿ ಹಾಗೂ ಢುಖರವಾಡಿ ಗ್ರಾಮಗಳಿಗೆ ಕೊನೆಗೂ ಸಾರಿಗೆ ಬಸ್ ಸೇವೆ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ.
ಸುಮಾರು 80 ವರ್ಷಗಳ ಕಾಲ ಈ ಗ್ರಾಮಗಳಿಗೆ ನೇರ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಸಂಚಾರಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆಯು ಖಾನಾಪುರ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಇದರ ಜೊತೆಗೆ ಗ್ರಾಮಗಳ ಸಮಸ್ಯೆಯನ್ನು ಸಾರ್ವಜನಿಕ ಮಾಧ್ಯಮ ಪಬ್ಲಿಕ್ ನೆಕ್ಸ್ಟ್ ವಾಹಿನಿ ಪ್ರಮುಖವಾಗಿ ಪ್ರಸಾರ ಮಾಡಿತ್ತು. ಮನವಿಗೆ ಹಾಗೂ ಸುದ್ದಿಗೆ ತ್ವರಿತ ಸ್ಪಂದನೆ ನೀಡಿದ ವಾಯವ್ಯ ಸಾರಿಗೆ ಖಾನಾಪುರ ಡಿಪೋ ಅಧಿಕಾರಿಗಳು ಗ್ರಾಮಗಳಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಸೋಮವಾರ ಬಸ್ ಮೊದಲ ಬಾರಿಗೆ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಬಸ್ ಸೇವೆ ಆರಂಭಿಸಲು ಸಹಕರಿಸಿದ ಡಿಪೋ ಮ್ಯಾನೇಜರ್ ಸಂತೋಷ ಬೆನಕನಕೊಪ್ಪ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್ ಹಿಂಡಲಗಿ ಹಾಗೂ ರಾಘವೇಂದ್ರ ಚಲವಾದಿ ಅವರನ್ನು ಗ್ರಾಮಸ್ಥರು ಶಾಲು ಹೊದಿಸಿ ಸತ್ಕರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಮಾದರ, ಉಪಾಧ್ಯಕ್ಷೆ ಉಜ್ವಲ ಕುಂಬಾರ, ಬಸವರಾಜ ಮಾದರ, ಶಶಿಧರ ನಾಯಕ, ಪರಶುರಾಮ ಅಲೋಲಕರ್, ರಾಜಾರಾಮ ಅಲೋಲಕರ್, ಮೋಹನ್ ಗುರವ್, ವಿಜಯ್ ಗುರವ್, ಬೈರೂ ಕುಂಬಾರ, ದೊಂಡಿಬಾ ಕುಂಬಾರ, ಸಂಜಯ್ ಕುಂಬಾರ, ಕಲ್ಲಪ್ಪ ಕುಂಬಾರ, ಹಲಕರ್ಣಿ ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮಸ್ಥರು ಮಾತನಾಡಿ, “ವರ್ಷಗಳ ಕಾಲ ಬಸ್ ಸೌಲಭ್ಯಕ್ಕಾಗಿ ಕಾಯುತ್ತಿದ್ದ ನಮಗೆ ಈಗ ಸಂಚಾರದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿದೆ. ನಮ್ಮ ಸಮಸ್ಯೆಯನ್ನು ಸಮಾಜದ ಮುಂದೆ ತಂದ ಪಬ್ಲಿಕ್ ನೆಕ್ಸ್ಟ್ ವಾಹಿನಿ ಹಾಗೂ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆಗೆ ನಾವು ಕೃತಜ್ಞರಾಗಿದ್ದೇವೆ” ಎಂದು ಹೇಳಿದರು.
ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
15/06/2026 08:15 pm