ಮುಂಬೈ: ಖ್ಯಾತ ಸಿನಿಮಾ ‘ಮುನ್ನಾಭಾಯಿ ಎಂಬಿಬಿಎಸ್’ ಖ್ಯಾತಿಯ ನಟಿ ಪ್ರಿಯಾ ಬಾಪಟ್ ಚಿತ್ರೀಕರಣದ ಸೆಟ್‌ಗಳಲ್ಲಿ ನಟಿಯರು ಎದುರಿಸುವ ಮುಜುಗರದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಶೂಟಿಂಗ್ ವೇಳೆ ನಿರ್ದೇಶಕರು ಕಟ್ ಹೇಳಿದರೂ ಸಹ-ನಟನೊಬ್ಬ ತನ್ನನ್ನು ಬಿಡದೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾ ಬಾಪಟ್, "ಅದೊಂದು ವೆಬ್ ಸರಣಿಯ ರೊಮ್ಯಾಂಟಿಕ್ ದೃಶ್ಯದ ಚಿತ್ರೀಕರಣವಾಗಿತ್ತು. ಕಥೆಯ ಬೇಡಿಕೆಯಂತೆ ಕಿಸ್ಸಿಂಗ್ ಸೀನ್ ಶೂಟ್ ಮಾಡಲಾಗುತ್ತಿತ್ತು. ಆದರೆ, ನಿರ್ದೇಶಕರು 'ಶಾಟ್ ಮುಗಿಯಿತು, ಕಟ್...' ಎಂದು ಹೇಳಿದ ಮೇಲೂ ಆ ನಟ ನನ್ನನ್ನು ಬಿಡಲಿಲ್ಲ. ಆತ ನನ್ನ ತುಟಿಯನ್ನು ಜೋರಾಗಿ ಕಚ್ಚುತ್ತಲೇ ಇದ್ದ" ಎಂದು ಆತಂಕಕಾರಿ ವಿಷಯ ಹಂಚಿಕೊಂಡಿದ್ದಾರೆ.
"ಆ ಕ್ಷಣದಲ್ಲಿ ನನಗೆ ತೀವ್ರ ಆಘಾತವಾಗಿತ್ತು. ತಕ್ಷಣವೇ ಆತನನ್ನು ತಳ್ಳಿ ದೂರ ಸರಿದೆ. ಆ ನಟನಿಗೆ ನಿರ್ದೇಶಕರು 'ಕಟ್' ಹೇಳಿದ್ದು ಕೇಳಿಸಲಿಲ್ಲವೇ ಅಥವಾ ಆತ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದನೇ ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ಆದರೆ, ಆ ಘಟನೆ ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು" ಎಂದು ಪ್ರಿಯಾ ಬಾಪಟ್ ಹೇಳಿದ್ದಾರೆ.
ಸದ್ಯ ನಟಿಯ ಈ ಶಾಕಿಂಗ್ ಹೇಳಿಕೆ ಸೋಶಿಯಲ್ ಮೀಡಿಯಾ ಹಾಗೂ ಬಾಲಿವುಡ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶೂಟಿಂಗ್ ಸೆಟ್‌ಗಳಲ್ಲಿ ನಟಿಯರ ಸುರಕ್ಷತೆ ಮತ್ತು ವೃತ್ತಿಪರತೆಯ ಬಗ್ಗೆ ಮತ್ತೆ ಪ್ರಶ್ನೆಗಳು ಏಳುವಂತೆ ಮಾಡಿದೆ.
PublicNext
08/06/2026 11:56 am