ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳು ಬರುತ್ತಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಂತಹ ಕಾಮೆಂಟ್‌ಗಳನ್ನು ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಂಜಗಢದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಯೋಗಿ ಆದಿತ್ಯನಾಥ್, "ಯಾರ ಮನೆಯ ಹೆಣ್ಣು ಮಕ್ಕಳಾದರೂ ಸರಿ, ಅವರು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು. ಹೆಣ್ಣುಮಕ್ಕಳ ವಿರುದ್ಧ ಇಂತಹ ಆಕ್ಷೇಪಾರ್ಹ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಹಾಕುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ನಾವು ಎಲ್ಲರ ಮಗಳು ಮತ್ತು ಎಲ್ಲರ ಸಹೋದರಿಯೂ ಒಂದೇ ಎಂಬ ಮೌಲ್ಯಗಳೊಂದಿಗೆ ಬೆಳೆದಿದ್ದೇವೆ. ಇದರಲ್ಲಿ ಯಾವುದೇ ಭೇದಭಾವ ಮಾಡಿಲ್ಲ," ಎಂದು ಸ್ಪಷ್ಟಪಡಿಸಿದರು.
"ಇತ್ತೀಚೆಗೆ ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಕಾಮೆಂಟ್‌ಗಳು ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಖಿಲೇಶ್ ಜೀ, ನೀವು ಇತರರಿಗೆ ಸಲಹೆ ನೀಡುತ್ತೀರಿ. ಆದರೆ ನಿಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರು ಸಭ್ಯ ಭಾಷೆಯನ್ನು ಬಳಸುವಂತೆ ನೋಡಿಕೊಳ್ಳಬೇಕು. ಈ ವಿಚಾರವನ್ನು ನೀವು ಅವರಿಗೆ ಅರ್ಥ ಮಾಡಿಸಬೇಕು. ಒಂದು ವೇಳೆ ನಿಮಗೆ ಅರ್ಥ ಮಾಡಿಸಲು ಸಾಧ್ಯವಾಗದಿದ್ದರೆ, ಅವರನ್ನು ನಮ್ಮ ಬಳಿ ಕಳುಹಿಸಿಕೊಡಿ. ನಾವು ಅವರಿಗೆ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುತ್ತೇವೆ," ಎಂದು ಯೋಗಿ ಆದಿತ್ಯನಾಥ್ ಪರೋಕ್ಷವಾಗಿ ಅಖಿಲೇಶ್ ಯಾದವ್‌ಗೆ ಟಾಂಗ್ ನೀಡಿದರು.
ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಮತ್ತು ದುರುದ್ದೇಶಪೂರ್ವಕ ಪೋಸ್ಟ್‌ಗಳನ್ನು ಹಾಕಿದ ಹಲವರ ವಿರುದ್ಧ ಕಾನ್ಪುರ ಪೊಲೀಸ್ ಕಮಿಷನರೇಟ್‌ನ ಸೈಬರ್ ಸೆಲ್‌ನಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅಖಿಲೇಶ್ ಯಾದವ್ ಪುತ್ರಿಯ ತಿರುಚಿದ ಫೋಟೋಗಳನ್ನು 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ಅತ್ಯಂತ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು. ದೂರಿನಲ್ಲಿ, ಪೋಸ್ಟ್ ಮಾಡಲಾಗಿರುವ ಫೋಟೋಗಳು ತಿರುಚಿದವು ಮತ್ತು ಅದರಲ್ಲಿ ಹಂಚಿಕೊಳ್ಳಲಾಗಿರುವ ಎಲ್ಲಾ ವಿಷಯಗಳು ಸುಳ್ಳು ಎಂದು ಉಲ್ಲೇಖಿಸಲಾಗಿದೆ.
PublicNext
14/06/2026 07:57 pm