ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು (BJP) ಬ್ಯಾನ್ ಮಾಡಿರುತ್ತಿದ್ದರು ಎಂದು ಗೆಹ್ಲೋಟ್ ಹೇಳಿದ್ದಾರೆ.
ಭಾನುವಾರ ಜೈಪುರದಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್, ದೇಶದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ವಾತಾವರಣ ಅತ್ಯಂತ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
"ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎಂದಿಗೂ ನೋಡಿರಲಿಲ್ಲ. ದೇಶ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಸಿದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿದ ಗೆಹ್ಲೋಟ್, ಕನಿಷ್ಠ ಐದು ಟಿಕೆಟ್‌ಗಳನ್ನಾದರೂ ಮುಸ್ಲಿಂ ಸಮುದಾಯಕ್ಕೆ ನೀಡಬಹುದಿತ್ತು ಎಂದರು. "ಬಿಜೆಪಿ ತನ್ನನ್ನು ಸಂಪೂರ್ಣ ಹಿಂದುತ್ವವಾದಿ ಪಕ್ಷವೆಂದು ಬಿಂಬಿಸಿಕೊಳ್ಳಲು ಈ ಪ್ರಯತ್ನ ಮಾಡುತ್ತಿದೆ. ನೀವು ಕೇವಲ ಹಿಂದುತ್ವದ ಅಜೆಂಡಾದ ಮೇಲೆ ಪಕ್ಷ ನಡೆಸಲು ಬಯಸುತ್ತೀರಾ? ಹಿಂದೂಗಳ ಹೆಸರಿನಲ್ಲಿ ಮಾತ್ರ ರಾಜಕಾರಣ ಮಾಡುತ್ತೀರಾ?" ಎಂದು ಪ್ರಶ್ನಿಸಿದರು.
ಗೆಹ್ಲೋಟ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಕಾಂಗ್ರೆಸ್‌ಗೆ ಹಿಂದೂಗಳ ಮೇಲೆ ದ್ವೇಷವಿದೆ ಎನ್ನುವುದಕ್ಕೆ ಈ ಹೇಳಿಕೆಯೇ ಸ್ಪಷ್ಟ ಸಾಕ್ಷಿ. ಕಾಂಗ್ರೆಸ್ ಮುಸ್ಲಿಮರ ಓಲೈಕೆ ರಾಜಕಾರಣದಲ್ಲಿ ತೊಡಗಿದೆ" ಎಂದು ಪೂನಾವಾಲಾ ಆರೋಪಿಸಿದರು. ಸುಪ್ರೀಂ ಕೋರ್ಟ್ ಪ್ರಕಾರ ಹಿಂದುತ್ವ ಒಂದು ಜೀವನ ಪದ್ಧತಿಯಾಗಿದೆ ಎಂದು ನೆನಪಿಸಿದ ಅವರು, "ಹೀಗಿರುವಾಗ ಇಂದಿರಾ ಗಾಂಧಿಯವರು ಬಿಜೆಪಿಯನ್ನು ಯಾಕೆ ನಿಷೇಧಿಸುತ್ತಿದ್ದರು?" ಎಂದು ಪ್ರಶ್ನಿಸಿ ಗೆಹ್ಲೋಟ್‌ಗೆ ತಿರುಗೇಟು ನೀಡಿದರು.
ಪೂನಾವಾಲಾ ತಮ್ಮ ಟೀಕೆಗಳನ್ನು ಮುಂದುವರಿಸಿ, ಗೆಹ್ಲೋಟ್ ಅವರ ಮಾತುಗಳು ಕಾಂಗ್ರೆಸ್ ನಾಯಕರ ತುರ್ತು ಪರಿಸ್ಥಿತಿಯ ಮನಸ್ಥಿತಿ ಮತ್ತು ಹಿಂದೂಗಳ ಮೇಲಿನ ದ್ವೇಷವನ್ನು ಎತ್ತಿ ತೋರಿಸುತ್ತದೆ ಎಂದರು. "ಇನ್ನು ಮುಂದೆ ಇದನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಕರೆಯಬಾರದು. ಬದಲಾಗಿ, ಇಂಡಿಯನ್ ನ್ಯಾಷನಲ್ ಕ್ಯಾಲಿಫೇಟ್ ಎಂದು ಕರೆಯಬೇಕು" ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಹಕ್ಕಿದೆ ಮತ್ತು ಕಾಂಗ್ರೆಸ್‌ಗೆ ಮುಸ್ಲಿಮರ ಅಗತ್ಯವಿದೆ ಎಂದು ಹೇಳುತ್ತದೆ. ಆದರೆ ನಾವು ಹಿಂದುತ್ವದ ಪರ ಮಾತನಾಡಿದರೆ ಅದು ದೊಡ್ಡ ಪಾಪ ಮಾಡಿದಂತೆ ಎಂಬಂತೆ ಅವರು ವರ್ತಿಸುತ್ತಾರೆ ಎಂದು ಪೂನಾವಾಲಾ ಲೇವಡಿ ಮಾಡಿದರು.
PublicNext
15/06/2026 02:08 pm