ಮುಂಡಗೋಡ: ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹು ಮುಖ್ಯವಾದ ಅಂಶವಾಗಿದ್ದು, ಜೀವನದಲ್ಲಿ ಕಷ್ಟವನ್ನು ಅನುಭವಿಸಿದವರು ಗೆಲುವನ್ನು ಸಾಧಿಸುತ್ತಾರೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು.
ಇಂದು ಮುಂಡಗೋಡನ ನಾಗನೂರು ಗ್ರಾಮದ ಚಿಪಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯು ತುಮಕೂರಿನ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸ್ಕೊಡ್‌ವೆಸ್ ಸಂಸ್ಥೆಯವರು ಆಯೋಜಿಸಿದ ಈ ಸಮಾಜ ಕಾರ್ಯ ಶಿಬಿರದಿಂದ ಸಮಾಜ ಕಾರ್ಯ ವಿದ್ಯಾರ್ಥಿಗಳು ಬುಡಕಟ್ಟು ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಅರಿವುಗಳನ್ನು ತಿಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಸಮಾಜ ಕಾರ್ಯ ಅಧ್ಯಯನವು ಕೇವಲ ಒಂದು ವಿಷಯವಾಗಿ ಮಾತ್ರವಲ್ಲದೇ, ಜೀವನದ ವಿಭಿನ್ನ ಹಂತಗಳನ್ನು ಅರಿಯುವ ಒಂದು ಘಟ್ಟವಾಗಿದ್ದು, ಈ ಸಮಯದಲ್ಲಿ ವೈಯಕ್ತಿಕ ಜೀವನದ ಸವಾಲುಗಳು ಮತ್ತು ಸೋಲುಗಳನ್ನು ಮನವರಿಕೆ ಮಾಡುವ ಹಂತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಪರಶುರಾಮ್ ಕೆಜಿ ರವರು ಸಮಾಜ ಕಾರ್ಯ ಶಿಬಿರದ ಮಹತ್ವವನ್ನು ತಿಳಿಸಿದರು. ಶಿಬಿರದಲ್ಲಿ ಉಪಸ್ಥಿತರಿದ್ದ ಮುಂಡಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಗನೂರು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಕೃಷ್ಣ ಮಹಾ ರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಭು ಆರ್ ಶಿಗ್ನೆಳ್ಳ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಶಿವರಾಮ ಭಟ್ಟ, ಸ್ಕೊಡ್‌ವೆಸ್‌ನ ಕೃಷಿ ವಿಭಾಗದ ಕಾರ್ಯಕ್ರಮ ಅಧಿಕಾರಿ ಪ್ರಶಾಂತ ನಾಯಕ, ವಿಶ್ವವಿದ್ಯಾಲಯದ ಶಿಬಿರಾಧಿಕಾರಿ ಟೀನ ಜೋಸ್, ಡೈಸನ್ ಪಿಟಿ, ಸಹ ಶಿಬಿರಾಧಿಕಾರಿ ಶೇಖರಯ್ಯ, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು. ಸಮಾಜ ಕಾರ್ಯ ವಿಭಾಗದ ಸುಮಾರು 100 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.
Kshetra Samachara
08/06/2026 06:42 pm