ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಕ್ತಿ ಯೋಜನೆ ಹೊಡೆತ, ವ್ಯಾಪಾರ ಕುಸಿತ, ಸಾಲದ ಕಿರುಕುಳ - ಮಂಡ್ಯ ಡಬಲ್ ಮರ್ಡರ್‌ಗೆ ಟ್ವಿಸ್ಟ್.!

ಮಂಡ್ಯದ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಪೊಲೀಸರಿಗೆ ದೊರೆತ ಡೆತ್‌ನೋಟ್ ಹಲವು ಸತ್ಯಗಳನ್ನು ಬಯಲಾಗಿದ್ದು, ಕುಟುಂಬದ ಸಾವಿಗೆ ಕಾರಣ ಸ್ಪಷ್ಟಪಡಿಸಿದೆ.

ಮಂಗಳವಾರ ನಸುಕಿನ ಜಾವ 3:30ರ ಸುಮಾರಿಗೆ ಪ್ರಭಾಕರ್ ತಮ್ಮ ಪತ್ನಿ ಜ್ಯೋತಿ ಮತ್ತು ಪುತ್ರ ಸಂತೋಷ್ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ತಮ್ಮ ಬಟ್ಟೆ ಅಂಗಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಜ್ಯೋತಿ ಅವರನ್ನು ಪಂಚೆಯಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಪುತ್ರ ಸಂತೋಷ್‌ನನ್ನೂ ಉಸಿರುಗಟ್ಟಿಸಿ ಕೊಂದಿರುವುದಾಗಿ ಶಂಕಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಡೆತ್‌ನೋಟ್‌ನಲ್ಲಿ ಪ್ರಭಾಕರ್ ತಮ್ಮ ಆರ್ಥಿಕ ಸಂಕಷ್ಟವನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿತ ಕಂಡಿದ್ದು, ಸಾಲದ ಒತ್ತಡ ವಿಪರೀತವಾಗಿ ಹೆಚ್ಚಾಗಿತ್ತು ಎಂದು ಬರೆದಿದ್ದಾರೆ. ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ತಮ್ಮ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಸಾಲ ತೀರಿಸಲು ಸಾಧ್ಯವಾಗದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಿಂದಲೇ ಈ ಕೃತ್ಯ ಎಸಗಿರುವುದಾಗಿ ಉಲ್ಲೇಖಿಸಿದ್ದಾರೆ. ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲದ ಒತ್ತಡ ಮತ್ತು ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ್ದೆ ಎಂದು ಸಹ ಪ್ರಭಾಕರ್ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಂತೋಷ್ ಅವರ ಪತ್ನಿ (ಸೊಸೆ) ಘಟನೆ ನಡೆದಾಗ ಗಾಢ ನಿದ್ರೆಯಲ್ಲಿದ್ದ ಕಾರಣ, ಮನೆಯಲ್ಲೇ ಇದ್ದರೂ ಈ ದುರಂತ ಆಕೆಯ ಗಮನಕ್ಕೆ ಬಂದಿಲ್ಲ. ಬೆಳಿಗ್ಗೆ ಎದ್ದು ತಿಂಡಿ ತಯಾರಿಸಿದ ಬಳಿಕ ಅತ್ತೆಯನ್ನು ಎಬ್ಬಿಸಲು ಕೊಠಡಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾತನಾಡಿರುವ ಮಂಡ್ಯ ಜಿಲ್ಲಾ ಪೊಲೀಸ್ ಎಸ್‌ಪಿ ಶೋಭಾರಾಣಿ, ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Edited By :
PublicNext

PublicNext

09/06/2026 03:48 pm

Cinque Terre

17.62 K

Cinque Terre

0