ಬೆಂಗಳೂರು : ಹೇರೋಹಳ್ಳಿಯಿಂದ ಮರುವಿಂಗಡಣೆಯಾದ ಬ್ಯಾಡರಹಳ್ಳಿ ವಾರ್ಡ್, ಶಾಸಕರ ಕಚೇರಿ ಇರುವ ವಾರ್ಡ್‌ನಲ್ಲೇ ಕಸದ ಸಾಮ್ರಾಜ್ಯ, ಕುಡುಕರ ಅಡ್ಡೆಯಾದ ಮೈದಾನ. ರಂಗೋಲಿ, ಕ್ರಿಕೆಟ್ ಪಂದ್ಯಾವಳಿ ನಡೆಸಿ ವೋಟ್ ಬ್ಯಾಂಕ್ ರಾಜಕಾರಣ ಈ ವಾರ್ಡ್ ನ ಹೈಲೈಟ್ಸ್ ಅಂತೆ.. ಸ್ವತಃ ಕ್ಷೇತ್ರದ ಶಾಸಕರ ಕಚೇರಿ ಇರುವುದೇ ಇದೇ ವಾರ್ಡ್‌ನಲ್ಲಿ. ಆದರೆ, ಇಂತಹ ವಿವಿಐಪಿ ವಾರ್ಡ್‌ನ ಸ್ಥಿತಿ ಮಾತ್ರ ಈಗ ನರಕಕ್ಕಿಂತ ಕಡೆಗಾಗಿದೆ. ಹೇರೋಹಳ್ಳಿ ವಾರ್ಡ್‌ನಿಂದ ಮರುವಿಂಗಡಣೆಯಾಗಿ ಹೊಸ ವಾರ್ಡ್ ಆಗಿದ್ದರೂ ಇಲ್ಲಿನ ಜನರ ಹಣೆಬರಹ ಮಾತ್ರ ಬದಲಾಗಿಲ್ಲ. ಕಸದ ಸಮಸ್ಯೆ, ಕುಡುಕರ ಕಾಟ, ರೌಡಿಗಳ ಅಬ್ಬರದಿಂದ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ.
ಹೌದು... ಇದು ಹೇರೋಹಳ್ಳಿಯಿಂದ ಮರುವಿಂಗಡಣೆಯಾಗಿರುವ ಬ್ಯಾಡರಹಳ್ಳಿ ವಾರ್ಡ್‌ನ ದಯನೀಯ ಸ್ಥಿತಿ. ಈ ವಾರ್ಡ್‌ನ ಅತಿದೊಡ್ಡ ಮೇಜರ್ ಸಮಸ್ಯೆ ಅಂದರೆ ಅದು ರಸ್ತೆ ಬದಿಯಲ್ಲಿ ಬೀಳುತ್ತಿರುವ ಕಸ. ಬಡಾವಣೆಗೆ ಎಂಟ್ರಿ ಕೊಡುವ ಮುಖ್ಯ ರಸ್ತೆಯಲ್ಲೇ ಜನ ಸಿಕ್ಕಸಿಕ್ಕ ಹಾಗೆ ಕಸ ಎಸೆದು ಹೋಗುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ, ಹಳೇ ಮನೆ ಕೆಡವಿದ ಕಟ್ಟಡ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಇನ್ನು 20 ವರ್ಷಗಳ ಹಿಂದೆ ನಿರ್ಮಿಸಲಾದ ಚರಂಡಿಗಳಲ್ಲಿ ಮಣ್ಣು ಮತ್ತು ಹೂಳು ತುಂಬಿಕೊಂಡಿದ್ದು, ಮಳೆ ಬಂದರೆ ಸಾಕು ಕಸವೆಲ್ಲಾ ಕೊಚ್ಚಿ ಬರುತ್ತಿದೆಯಂತೆ
ಇಲ್ಲಿ ಕಸದ ಸಮಸ್ಯೆ ಒಂದಡೆಯಾದರೆ, ಭದ್ರತೆಯದ್ದೇ ಮತ್ತೊಂದು ದೊಡ್ಡ ತಲೆನೋವು. ವಾರ್ಡ್‌ನಲ್ಲಿರುವ ಏಕೈಕ ಆಟದ ಮೈದಾನ ಈಗ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಯಾಕಂದ್ರೆ ಅದು ಈಗ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ರಾತ್ರಿಯಾಗುತ್ತಿದ್ದಂತೆ ಸಾಲು ಸಾಲು ಕುಡುಕರು ಇಲ್ಲಿ ಬಂದು ಪಾರ್ಟಿ ಮಾಡುತ್ತಾರೆ, ಕುಡಿದು ಬಾಟಲಿಗಳನ್ನು ಅಲ್ಲೇ ಒಡೆದು ಹಾಕುತ್ತಾರಂತೆ.
ಇನ್ನು ಹಿಂದೆ ಗೆದ್ದ ಕಾರ್ಪೊರೇಟರ್ ಎಲೆಕ್ಷನ್ ಆದಮೇಲೆ ಏರಿಯಾದಲ್ಲೇ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಈಗ ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ವಾರ್ಡ್‌ನಲ್ಲಿ ಹೊಸದೊಂದು ಆತಂಕ ಶುರುವಾಗಿದೆ. ರೌಡಿ ಶೀಟರ್‌ಗಳು, ಸ್ಥಳೀಯ ರೌಡಿಗಳು ಏರಿಯಾದಲ್ಲಿ ತಾವೇ ಮುಂದಿನ ಕ್ಯಾಂಡಿಡೇಟ್‌ಗಳು ಎನ್ನುವ ರೇಂಜ್‌ನಲ್ಲಿ ಓಡಾಡುತ್ತಾ ದಾದಾಗಿರಿ ಮಾಡುತ್ತಿದ್ದಾರೆ.
ಗೆದ್ದಿರೋ ಕಾರ್ಪೊರೇಟರ್ ಮುಖ ನೋಡಿ ವರ್ಷಗಳೇ ಆಯ್ತು. ಈಗ ಎಲೆಕ್ಷನ್ ಬರುತ್ತಿದ್ದಂತೆ ರೌಡಿಗಳೆಲ್ಲಾ ಬಂದು ತಾವೇ ಲೀಡರ್ ತರಹ ಆಡುತ್ತಿದ್ದಾರೆ. ಹೆಂಗಸರಿಗೆ ರಂಗೋಲಿ ಸ್ಪರ್ಧೆ, ಹುಡುಗರಿಗೆ ಕ್ರಿಕೆಟ್ ಟೂರ್ನಮೆಂಟ್ ಆಡಿಸಿ ವೋಟ್ ಗಿಟ್ಟಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ. ಆದರೆ ರಸ್ತೆ ಗುಂಡಿ ಮುಚ್ಚಲು, ಮೋರಿ ಕ್ಲೀನ್ ಮಾಡಲು ಇವರಿಗೆ ಯೋಗ್ಯತೆ ಇಲ್ಲ ಅಂತ ಆರೋಪ ಮಾಡಿದ್ದಾರೆ.
ಸ್ವತಃ ಶಾಸಕರ ಕಚೇರಿ ಇರುವ ಬ್ಯಾಡರಹಳ್ಳಿ ವಾರ್ಡ್‌ನಲ್ಲೇ ಇಷ್ಟೊಂದು ಅವಾಂತರಗಳಿದ್ದರೆ, ಇನ್ನುಳಿದ ವಾರ್ಡ್‌ಗಳ ಕಥೆ ಏನೋ? ರಂಗೋಲಿ ಸ್ಪರ್ಧೆ, ಕ್ರಿಕೆಟ್ ಪಂದ್ಯಾವಳಿ ನಡೆಸಿ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ನಾಯಕರಿಗೆ ಈ ಬಾರಿ ಜನರೇ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಇನ್ನಾದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ಕಸ ಮತ್ತು ಚರಂಡಿ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
PublicNext
09/06/2026 07:41 pm