ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಪ್ರವಾಹಕ್ಕೆ ಶಾಶ್ವತ ಪರಿಹಾರ: ಒತ್ತುವರಿ ತೆರವಿಗೆ ಕಮಿಷನರ್ ಆದೇಶ!

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ರವರು ಯೋಜನೆ ಅನುಷ್ಠಾನ ಘಟಕ ಮೂಲಕ ವಿಶ್ವ ಬ್ಯಾಂಕ್ ಅನುದಾನದಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಳೆನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಕಾಮಗಾರಿಗಳ ಗುಣಮಟ್ಟ, ಮಳೆನೀರು ಹರಿವಿನ ಸಾಮರ್ಥ್ಯ, ಕಂದಾಯ ನಕ್ಷೆಯಂತೆ ಕಾಲುವೆಗಳ ಮೂಲ ಅಗಲಕ್ಕೆ ಪುನಃಸ್ಥಾಪನೆ, ಒತ್ತುವರಿ ತೆರವು ಹಾಗೂ ಪ್ರವಾಹ ಸಮಸ್ಯೆಗಳ ಶಾಶ್ವತ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು.

ರಾಮಗೊಂಡನಹಳ್ಳಿಯ ಮಣಿಪಾಲ್ ಆಸ್ಪತ್ರೆ ಸಮೀಪ ನಡೆಯುತ್ತಿರುವ ಮಳೆನೀರು ಕಾಲುವೆ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು, ಕಾಲುವೆ ವ್ಯಾಪ್ತಿಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಕಂದಾಯ ನಕ್ಷೆಯಲ್ಲಿರುವಂತೆ ಕಾಲುವೆಯ ಮೂಲ ಅಗಲವನ್ನು ಮರುಸ್ಥಾಪಿಸುವ ಸಲುವಾಗಿ ಸರ್ವೆ ಅಧಿಕಾರಿಗಳ ಮೂಲಕ ತಕ್ಷಣ ಸರ್ವೆ ಕಾರ್ಯ ಕೈಗೊಂಡು, ಒತ್ತುವರಿ ಜಾಗವನ್ನು ಗುರುತಿಸಿ ಕಾಲುವೆಗಳ ಗಡಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸುವಂತೆ ಸೂಚಿಸಿದರು. ಕಾಲುವೆಗಳ ಒತ್ತುವರಿ ಕಂಡುಬಂದಲ್ಲಿ ಕಾನೂನುಬದ್ಧ ಕ್ರಮಗಳ ಮೂಲಕ ಕೂಡಲೇ ತೆರವುಗೊಳಿಸಿ, ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಯಾವುದೇ ಅಡ್ಡಿ ಉಂಟಾಗದಂತೆ ಕ್ರಮವಹಿಸಲು ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವರ್ತೂರು ಕೋಡಿಯಿಂದ ಹಗದೂರು ನಡುವಿನ ರಾಜಕಾಲುವೆ ಪ್ರಮುಖ ಕಾಲುವೆಯಾಗಿದ್ದು, ಈ ಕಾಲುವೆಯನ್ನು ಕಂದಾಯ ದಾಖಲೆಗಳ ಪ್ರಕಾರ ಅವುಗಳ ಮೂಲ ಅಗಲದಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿರುವುದರಿಂದ ಮಳೆ ನೀರಿನ ಹರಿವಿನ ಸಾಮರ್ಥ್ಯ ಹೆಚ್ಚಳವಾಗುವುದರ ಜೊತೆಗೆ ಪ್ರವಾಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ಉಪ ಕಾಲುವೆಗಳಿಂದ ಬರುವ ಮಳೆ ನೀರು ಯಾವುದೇ ಅಡೆತಡೆಯಿಲ್ಲದೆ ಮುಖ್ಯ ಕಾಲುವೆಗೆ ಹರಿಯಲಿದ್ದು, ನೀರಿನ ಮಟ್ಟವನ್ನು ಸಹಜ ನೆಲಮಟ್ಟಕ್ಕಿಂತ ಕೆಳಗಿಡಲು ಸಹಕಾರಿಯಾಗಲಿದೆ ಎಂದು ಆಯುಕ್ತರು ತಿಳಿಸಿದರು. ವರ್ತೂರು ಕೋಡಿ – ಹಗದೂರು ರಾಜಕಾಲುವೆ ವ್ಯಾಪ್ತಿಯಲ್ಲಿ ಸ್ಥಳೀಯ ನಾಗರಿಕರು ಸ್ವಯಂಪ್ರೇರಿತವಾಗಿ ಅತಿಕ್ರಮಣಗಳನ್ನು ತೆರವುಗೊಳಿಸಿ ಯೋಜನೆಗೆ ಸಹಕರಿಸುತ್ತಿರುವುದನ್ನು ಶ್ಲಾಘಿಸಿದ ಆಯುಕ್ತರು, ಸಾರ್ವಜನಿಕ ಸಹಭಾಗಿತ್ವದಿಂದ ನಗರ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ ಎಂದು ಅಭಿಪ್ರಾಯಪಟ್ಟರು.

ವರ್ತೂರು ಲೇಔಟ್ ಪ್ರದೇಶದಲ್ಲಿ ಪ್ರಸ್ತುತ ಸುಮಾರು 3.5 ಮೀಟರ್ ಅಗಲವಿರುವ ಮಳೆನೀರು ಕಾಲುವೆಯನ್ನು 8 ಮೀಟರ್ ಅಗಲಕ್ಕೆ ವಿಸ್ತರಿಸಿ ಅಭಿವೃದ್ಧಿಪಡಿಸುತ್ತಿದ್ದು, ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಕಾಲುವೆಯ ನೈಜ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದ್ದು ಇದರಿಂದ ಮಳೆಗಾಲದಲ್ಲಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತದೆ ಮತ್ತು ಪ್ರವಾಹ ಸಮಸ್ಯೆಗಳನ್ನು ತಡೆಯಲು ಇದರಿಂದ ನೆರವಾಗಲಿದೆ ಎಂದು ಆಯುಕ್ತರು ತಿಳಿಸಿದರು.

ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರು (ಯೋಜನಾ ಅನುಷ್ಠಾನ ಘಟಕ), ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/06/2026 09:56 pm

Cinque Terre

16

Cinque Terre

0

ಸಂಬಂಧಿತ ಸುದ್ದಿ