ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಹಾಗೂ ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ರವರ ನೇತೃತ್ವದಲ್ಲಿ ಇಂದು ಜಯನಗರದ ಸಿ.ಐ.ಎಂ.ಎಸ್. ಆಡಿಟೋರಿಯಂನಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಗೆ ಆರ್ ಬಿ ಐ ಲೇಔಟ್, ಹೆಚ್ಎಸ್ಆರ್ ಲೇಔಟ್, ಹಾಲಿಡೇ ವಿಲೇಜ್ ರಸ್ತೆ, ಎಲ್ ಐಸಿ ಕಾಲೋನಿ, ಜ್ಯುಡಿಶಿಯಲ್ ಲೇಔಟ್, ಕಸವನಹಳ್ಳಿ, ಕೋರಮಂಗಲ, ರೂಪೇನ ಅಗ್ರಹಾರ RWA ಪ್ರತಿನಿಧಿಗಳು, ಸಾರ್ವಜನಿಕರು ಸೇರಿದಂತೆ 53ಕ್ಕೂ ಹೆಚ್ಚು ಜನರು ತಮ್ಮ ಅಹವಾಲುಗಳನ್ನು ಮುಖ್ಯ ಆಯುಕ್ತರ ಗಮನಕ್ಕೆ ತಂದರು.
ವೆಗಾ ಸಿಟಿ ಮಾಲ್ ಬಳಿಯ ರಾಜಕಾಲುವೆ ಡಿ-ಸಿಲ್ಟಿಂಗ್ ಕಾರ್ಯ, ಮಳೆ ಹಾನಿ ಸಮಸ್ಯೆ, ಪಾಲಿಕೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ಸಂಗ್ರಹಣೆ ಮತ್ತು ವಿಲೇವಾರಿ, ತಲಘಟ್ಟಪುರ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಫುಟ್‌ಪಾತ್ ಸಮಸ್ಯೆ, ಹೆಮ್ಮಿಗೆಪುರ ವಾರ್ಡ್‌ನ ಖಾತಾ ಮೇಳ, ಹೆಚ್.ಎಸ್.ಆರ್ ಲೇಔಟ್‌ನ ಸರ್ವಿಸ್ ರಸ್ತೆಗಳ ಅತಿಕ್ರಮಣ ತೆರವು ಹಾಗೂ ಸ್ಕೈ ವಾಕ್ ಕೆಳಗೆ ಕೆಟ್ಟು ನಿಂತಿರುವ ಲಿಫ್ಟ್ ರಿಪೇರಿ, ರೂಪೇನ ಅಗ್ರಹಾರದ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣ, ಕೋಡಿ ಚಿಕ್ಕನಹಳ್ಳಿಯ ಕಸದ ಸಮಸ್ಯೆ ಹಾಗೂ ಕೋರಮಂಗಲದ ಪಿಜಿ, ಪಬ್, ಬಾರ್ ಸಮಸ್ಯೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆಯುಕ್ತರ ಗಮನಕ್ಕೆ ತಂದರು.
ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಅವರು, ಸಾರ್ವಜನಿಕರು ನೀಡಿರುವ ಸಮಸ್ಯೆಗಳ ಪೈಕಿ ತುರ್ತಾಗಿ ಪರಿಹಾರ ನೀಡುವ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕ ಕುಂದುಕೊರತೆ ಆಲಿಸುವ ಸಭೆಯನ್ನು ಆಯುಕ್ತರು ಹಾಗೂ ಜಂಟಿ ಆಯುಕ್ತರ ಹಂತದಲ್ಲಿ ಆಗಾಗ್ಗೆ ನಡೆಸುವಂತೆ ಸೂಚಿಸಿದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಕುರಿತು ಹಲವಾರು ಸಭೆಗಳು ಹಾಗೂ ಸ್ಥಳ ಪರಿಶೀಲನೆ ನಡೆಸಲಾಗಿರುತ್ತದೆ. ಪಾಲಿಕೆ ಅಧಿಕಾರಿಗಳು ವಾರ್ಡ್ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಬಗೆಹರಿಸಲು ಸ್ಥಳೀಯ ಮಟ್ಟದಲ್ಲಿ ನಿವಾಸಿಗಳ ಸಂಘದ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್ ರಚನೆ ಮಾಡಲಾಗುತ್ತಿದ್ದು ನಾಗರಿಕರ ಸಹಕಾರ ಅಗತ್ಯ ಇದೆಯೆಂದು ತಿಳಿಸಿದರು.
ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ರವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಅದರ ಅವಶ್ಯಕತೆ ಹಾಗೂ ಮಹತ್ವದ ಕುರಿತು ಅರಿವು ಮೂಡಿಸಿದರು. ಬಿ.ಎಲ್.ಓ ಗಳು ತಮ್ಮ ಮನೆಗೆ ಬಂದಾಗ ನೂತನ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ನೀಡುವಂತೆ ತಿಳಿಸಿದರು. BLO ಆಪ್ ಮೂಲಕ ಮತದಾರರ ಸಂಪೂರ್ಣ ವಿವರ ಲಭ್ಯವಿದ್ದು, ಪ್ರತಿ ಪೋಲಿಂಗ್ ಬೂತ್‌ಗಳಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಎಸ್ ಐ ಆರ್ ಕುರಿತು ಸಾರ್ವಜನಿಕರು ಕೇಳಿದ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಆಯುಕ್ತರು ಪರಿಹಾರ ನೀಡಿದರು.
ಈ ವೇಳೆ ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು ಹಾಗೂ ರಾಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
20/06/2026 09:40 pm