ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಸ್ಥಳೀಯ ವ್ಯಕ್ತಿ ಹಾಗೂ ಆಂಧ್ರಪ್ರದೇಶದ ಪ್ರವಾಸಿಗರ ನಡುವೆ ನಡೆದ ಗಲಾಟೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಮತ್ತು ಕೌಂಟರ್ ಕೇಸ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರದಂತೆ, ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ರಂಗ ರಾವ್ ಅವರು ಕುಟುಂಬದವರೊಂದಿಗೆ ಶ್ರೀ ಕೃಷ್ಣ ಮಠಕ್ಕೆ ದರ್ಶನಕ್ಕೆ ಬಂದಿದ್ದು, ಕಾರು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಸುಪ್ರೀತ್ ಕುಮಾರ್ ಎಂಬವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಶ್ನಿಸಿದಾಗ ವಾಗ್ವಾದ ಉಂಟಾಗಿ, ಬಳಿಕ ಸುಪ್ರೀತ್ ಕುಮಾರ್ ಲಾಠಿಯಂತಹ ಕೋಲಿನಿಂದ ಹಲ್ಲೆ ನಡೆಸಿದ್ದು, ರಂಗ ರಾವ್ ಅವರ ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 71/2026ರಡಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ ಅವರು ನೀಡಿದ ದೂರಿನಲ್ಲಿ, ತಮ್ಮ ಕಾರಿನ ಎದುರು ತೆಲಂಗಾಣ ನೋಂದಣಿ ಸಂಖ್ಯೆಯ ವಾಹನ ಅಜಾಗರೂಕತೆಯಿಂದ ಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಕಾರಿನಲ್ಲಿದ್ದ ಚಾಲಕ ಹಾಗೂ ಇತರರು ಫೋಟೋ ಸ್ಟ್ಯಾಂಡ್, ಕುರ್ಚಿ ಹಾಗೂ ಕಬ್ಬಿಣದ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಅವರ ನಾಲಿಗೆಯಿಂದ ರಕ್ತಸ್ರಾವವಾಗಿದ್ದು, ಕಾರಿನ ಮುಂಭಾಗದ ಗಾಜು ಹಾಗೂ ಕನ್ನಡಿಗೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಅಪರಾಧ ಸಂಖ್ಯೆ 72/2026ರಡಿ ಪ್ರತಿದೂರು ದಾಖಲಾಗಿದೆ.
ಪೊಲೀಸರು ಎರಡೂ ಪ್ರಕರಣಗಳನ್ನು ಕೇಸ್ ಮತ್ತು ಕೌಂಟರ್ ಕೇಸ್ ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಒಂದು ಪ್ರಕರಣದ ಆರೋಪಿ ಸುಪ್ರೀತ್ ಕುಮಾರ್ (40) ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
10/06/2026 11:17 am