ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಂತರ್‌ರಾಜ್ಯ ಮನೆ ಕಳ್ಳತನದ ‘TATTOO 313’ ಗ್ಯಾಂಗ್‌ ಭೇದಿಸಿದ ಮಣಿಪಾಲ ಪೊಲೀಸರು !

ಉಡುಪಿ: ಅಂತರ್‌ರಾಜ್ಯ ಮಟ್ಟದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದ ‘TATTOO 313’ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಮಣಿಪಾಲ ಪೊಲೀಸರು ಬಂಧಿಸಿ, ₹7.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಮಿತ್ ಡ್ಯಾನಿಯಲ್ ಅವರು ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದು, ಫೆಬ್ರವರಿ 3ರಂದು ಮನೆಗೆ ಬೀಗ ಹಾಕಿ ತಾಯಿ ಮನೆಗೆ ತೆರಳಿದ್ದರು.

ಫೆಬ್ರವರಿ 4ರಂದು ಮಧ್ಯಾಹ್ನ ಪಕ್ಕದ ಮನೆಯವರು ಮನೆಯ ಬಾಗಿಲು ತೆರೆದಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ಸುಮಾರು 75 ಗ್ರಾಂ ತೂಕದ, ₹7 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಯುತ್ತಿದ್ದ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ (ತನಿಖೆ) ಶಂಭುಲಿಂಗಯ್ಯ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಅವರು ಬೆಂಗಳೂರಿನ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಚಂದ್ರು (26) ಎಂದು ಗುರುತಿಸಲ್ಪಟ್ಟರು. ವಿಚಾರಣೆ ವೇಳೆ ಆರೋಪಿಗಳು ರೈಲ್ವೆ ಹಳಿ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವುದನ್ನು ಹಾಗೂ ಮತ್ತೊಂದು ಕಳ್ಳತನಕ್ಕೆ ಸಿದ್ಧತೆ ನಡೆಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ.

ಬಳಿಕ ಅವರನ್ನು ಠಾಣೆಗೆ ಕರೆತಂದು ತನಿಖೆ ನಡೆಸಿದಾಗ, ಮಣಿಪಾಲ ಠಾಣೆಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತು.ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಶಿವಮೊಗ್ಗದ ಲಾಡ್ಜ್‌ನಲ್ಲಿ ಕಳವು ಮಾಡಿದ ಚಿನ್ನಾಭರಣವನ್ನು ಅಡಗಿಸಿಟ್ಟಿರುವ ಮಾಹಿತಿ ಲಭಿಸಿತು. ಅದರಂತೆ ಪೊಲೀಸರು 60 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ನೆಕ್ಲೆಸ್‌, ಕಿವಿಯೋಲೆ ಹಾಗೂ ಚೈನ್ ಸೇರಿದಂತೆ ಒಟ್ಟು ₹7.90 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಎರಡು ಮೊಬೈಲ್‌ ಫೋನ್‌ಗಳನ್ನೂ ಜಪ್ತಿ ಮಾಡಲಾಗಿದೆ. ಆರೋಪಿಗಳು ತಮ್ಮ ಕೈಗಳ ಮೇಲೆ ‘TATTOO 313’ ಎಂಬ ಟ್ಯಾಟೂ ಹಾಕಿಸಿಕೊಂಡು ಗ್ಯಾಂಗ್‌ ಗುರುತನ್ನು ಹೊಂದಿದ್ದು, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸಮೀಪದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ.

ರಾತ್ರಿ ವೇಳೆ ಮುಖಕ್ಕೆ ಮಾಸ್ಕ್‌, ಕೈಗಳಿಗೆ ಗ್ಲೌಸ್‌, ಕಾಲಿಗೆ ಸಾಕ್ಸ್‌ ಧರಿಸಿ, ಕಬ್ಬಿಣದ ಉಪಕರಣಗಳ ಸಹಾಯದಿಂದ ಮನೆಗಳ ಬೀಗ ಮುರಿದು ಕಳ್ಳತನ ನಡೆಸುವುದು ಇವರ ಕಾರ್ಯವೈಖರಿಯಾಗಿತ್ತು. ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ 2025ರ ಸೆಪ್ಟೆಂಬರ್‌ನಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ನಡೆಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳ ಬಂಧನ ಬಾಕಿಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/06/2026 12:46 pm

Cinque Terre

1,000

Cinque Terre

0

ಸಂಬಂಧಿತ ಸುದ್ದಿ