ಗದಗ : ಖೇತ್ ಬಚಾವೋ ಅಭಿಯಾನದಡಿ ಕೃಷಿ ಇಲಾಖೆ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ತಾಲೂಕಿನ ಬೂದಿಶ್ವರ ಹೊಸಳ್ಳಿ ಹಾಗೂ ಶ್ಯಾಗೋಟಿ ಗ್ರಾಮಗಳಲ್ಲಿ ಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಬೀಜೊಪಚಾರದ ಕುರಿತು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಉತ್ಪಾದನೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ (ಏಗಿಏ) ಹುಲಕೋಟಿ ಸಹಭಾಗಿತ್ವದಲ್ಲಿ ಖೇತ್ ಬಚಾವೋ ಅಭಿಯಾನ ಎಂಬ ಮಹತ್ವದ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಅಭಿಯಾನದ ಮುಖ್ಯ ಉದ್ದೇಶ ಜಮೀನಿನಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದು, ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದಾಗಿದೆ.
ಸದರಿ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕರು-1 ಗದಗ ಶ್ರೀಮತಿ ಸ್ಪೂರ್ತಿ ಜಿ. ಎಸ್ , ಹಾಗೂ ಎನ್. ಎಚ್ ಭಂಡಿ, ಪ್ರವೀಣ ಕರಿಕಟ್ಟಿ, ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಶ್ರೀಮತಿ ರಾಜರಾಜೇಶ್ವರಿ ಚಿನಿವಾರ ಹಾಗೂ ಬಸವರಾಜೇಶ್ವರಿ ಸಜ್ಜನರ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಹಾಗೂ ವಿಜಯಕುಮಾರ ಸುಂಕದ ಹಾಗೂ ಇನ್ನಿತರ ಪ್ರಗತಿಪರ ರೈತರು ಭಾಗವಹಿಸಿದ್ದರು.
ವಿಜ್ಞಾನಿಗಳು ಮಣ್ಣು ಪರೀಕ್ಷೆಯ ಮಹತ್ವ, ಸಮತೋಲನ ಗೊಬ್ಬರ ಬಳಕೆ, ಜೈವಿಕ ಕೃಷಿ ವಿಧಾನಗಳು, ನೀರಿನ ಸಂರಕ್ಷಣೆ ಹಾಗೂ ಸಮಗ್ರ ಕೀಟ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ರೈತರಿಗೆ ಪ್ರಾಯೋಗಿಕವಾಗಿ ಬೀಜೊಪಚಾರ ಮಾಡುವ ಕುರಿತು ಮಾಹಿತಿ ನೀಡಲಾಯಿತು.
PublicNext
10/06/2026 06:13 pm