ಜೈಪುರ: ರಾಜಸ್ಥಾನದ ಜೈಪುರದ ಖೋಹ್ ನಾಗೋರಿಯನ್ ಪ್ರದೇಶದಲ್ಲಿ ನಡೆದ ಭೀಕರ ಪಟಾಕಿ ಕಾರ್ಖಾನೆ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಈ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ ಜವರಾಯನ ಅಟ್ಟಹಾಸಕ್ಕೆ ಮಗು ಮತ್ತು ಇಬ್ಬರು ಸಹೋದರರು ಸೇರಿದಂತೆ ಒಟ್ಟು ಎಂಟು ಮಂದಿ ದಾರುಣವಾಗಿ ಬಲಿಯಾಗಿದ್ದರು.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಖೋಹ್ ನಾಗೋರಿಯನ್ ಪೊಲೀಸ್ ಠಾಣೆಯ ಸಹಾಯಕ ಸಬ್ - ಇನ್ಸ್‌ಪೆಕ್ಟರ್ (ಎಎಸ್ಐ) ಅಮರ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪಪ್ಪು ರಾಮ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು, ಮಂಗಳವಾರ ರಾತ್ರಿಯಿಂದಲೇ ಖೋಹ್ ನಾಗೋರಿಯನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ದಾಳಿ ನಡೆಸುತ್ತಿದ್ದಾರೆ. ಆಯಿಷಾ ಕಾಲೋನಿಯ ಹಲವು ಮನೆಗಳ ಮೇಲೆಯೂ ದಾಳಿ ನಡೆಸಲಾಗಿದ್ದು, ಅಲ್ಲಿಯೂ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ದಾಳಿಯ ಸಂದರ್ಭದಲ್ಲಿ ಮೂರು ಪ್ರತ್ಯೇಕ ಕಾರ್ಖಾನೆ ಮತ್ತು ಗೋದಾಮುಗಳಿಂದ ಭಾರಿ ಪ್ರಮಾಣದ ಅಕ್ರಮ ಗನ್‌ಪೌಡರ್ (ಸ್ಫೋಟಕ ಪುಡಿ) ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಅಕ್ರಮ ಪಟಾಕಿ ತಯಾರಿಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಐದು ಕಾರ್ಖಾನೆ ಹಾಗೂ ಗೋದಾಮುಗಳನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಆದರೆ, ಬುಧವಾರ ಮಧ್ಯಾಹ್ನದವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಾರ್ಖಾನೆಯಲ್ಲಿ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಬಳಸಲಾಗುವ ‘ಕೋಲ್ಡ್ ಫೈರ್’ (ಹೊಗೆಯಿಲ್ಲದ) ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ತಡೆಯಲು ಮನೆಯೊಂದರ ಮಧ್ಯೆ ಗೋಡೆ ಕಟ್ಟಿ, ಎರಡು ಭಾಗಗಳನ್ನಾಗಿ ಮಾಡಿ ಈ ಅಕ್ರಮ ದಂಧೆ ನಡೆಸಲಾಗುತ್ತಿತ್ತು. ಜಾವೇದ್ ವಿಹಾರ್‌ನಲ್ಲಿ ನಡೆದ ದಾಳಿಯ ವೇಳೆ ಒಂದೇ ಆವರಣದಲ್ಲಿದ್ದ ಮೂರು ಗೋದಾಮುಗಳನ್ನು ಸೀಲ್ ಮಾಡಲಾಗಿದ್ದು, ಪಟಾಕಿ ತಯಾರಿಕೆಗೆ ಬಳಸುತ್ತಿದ್ದ ಎರಡು ಯಂತ್ರಗಳನ್ನು ಜಪ್ತಿ ಮಾಡಲಾಗಿದೆ.
ಈ ದುರಂತ ಸಂಭವಿಸಿದ ಆಸ್ತಿಯು ಯಾಕೂಬ್ ಎಂಬಾತನಿಗೆ ಸೇರಿದ್ದಾಗಿದೆ. ಸದ್ಯ ಮನೆ ಮಾಲೀಕ ಯಾಕೂಬ್ ಮತ್ತು ದೆಹಲಿ ಮೂಲದ ಕಾರ್ಖಾನೆ ಆಪರೇಟರ್ ಫಿರೋಜ್ ಇಬ್ಬರೂ ಘಟನೆಯ ನಂತರ ತಲೆಮರೆಸಿಕೊಂಡಿದ್ದು, ಪೊಲೀಸರು ಇವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಯಾಕೂಬ್ ಮತ್ತು ಆತನ ಸೋದರಳಿಯ ಖಯೂಮ್ ಅವರನ್ನು ಈ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಜನನಿಬಿಡ ವಸತಿ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ಪಟಾಕಿ ಘಟಕ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಹೇಗೆ ಕಾರ್ಯನಿರ್ವಹಿಸುತ್ತಿತ್ತು? ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದರೇ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭೀಕರ ದುರಂತವು ಜೈಪುರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಕೈಗಾರಿಕಾ ಅಪಘಾತಗಳಲ್ಲಿ ಒಂದಾಗಿದ್ದು, ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಪೊಲೀಸರು ಅಕ್ರಮ ಘಟಕಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
PublicNext
10/06/2026 07:02 pm