ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಡ್ಜ್‌ಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ - ದೆಹಲಿ ಹೈಕೋರ್ಟ್ ಗರಂ!

ನವದೆಹಲಿ: "ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ಆದೇಶಗಳನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ನ್ಯಾಯಾಧೀಶರ ಘನತೆಗೆ ಧಕ್ಕೆ ತರಲು ಅಥವಾ ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲು ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ" ಎಂದು ದೆಹಲಿ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ನ್ಯಾಯಾಧೀಶರ ವಿರುದ್ಧ ಯಾವುದೇ ಆಧಾರವಿಲ್ಲದೇ ದುರುದ್ದೇಶಪೂರ್ವಕ ಆರೋಪಗಳನ್ನು ಮಾಡುವುದು ಕಾನೂನುಬದ್ಧ ವಿಮರ್ಶೆಯಾಗುವುದಿಲ್ಲ. ಇದು ನೇರವಾಗಿ 'ನ್ಯಾಯಾಂಗ ನಿಂದನೆ' ವ್ಯಾಪ್ತಿಗೆ ಬರುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.

ಕಳೆದ ತಿಂಗಳು ಸೈದುಲಾಜಾಬ್‌ನಲ್ಲಿ ಬಹುಮಹಡಿ ಕಟ್ಟಡ ಕುಸಿದು ಆರು ಮಂದಿ ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ಡಾ. ಕಪಿಲ್ ಕಕರ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಇದರ ವಿರುದ್ಧ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ (DHCBA) ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಮಧು ಜೈನ್ ಅವರ ರಜಾಕಾಲದ ಪೀಠವು, ಕಕರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ವಿಡಿಯೋದಲ್ಲಿರುವ ಆರೋಪಗಳು "ಸಂಪೂರ್ಣವಾಗಿ ಹಗರಣದಿಂದ ಕೂಡಿವೆ" ಮತ್ತು ನ್ಯಾಯ ವಿತರಣಾ ವ್ಯವಸ್ಥೆಗೆ ಧಕ್ಕೆ ತರುವಂತಿವೆ ಎಂದು ಆಕ್ರೋಶ ಹೊರಹಾಕಿದೆ.

ಟ್ವಿಟರ್ (X), ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ನ್ಯಾಯಾಲಯವು ತುರ್ತು ನಿರ್ದೇಶನ ನೀಡಿದ್ದು, ಆಕ್ಷೇಪಾರ್ಹ ವೀಡಿಯೊಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ಸಂಬಂಧಿತ ಖಾತೆಗಳನ್ನು ಬ್ಲಾಕ್ ಮಾಡಲು ಆದೇಶಿಸಿದೆ. ಅಷ್ಟೇ ಅಲ್ಲದೆ, ಈ ಕೃತ್ಯ ಎಸಗಿದ ಖಾತೆಗಳ ಐಪಿ ಲಾಗ್ಸ್ (IP Logs) ಮತ್ತು ನೋಂದಣಿ ವಿವರಗಳನ್ನು ನೀಡುವಂತೆ ಸೂಚಿಸಿದೆ.

"ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾನೂನುಬಾಹಿರ ವಿಷಯಗಳು ಹರಿದಾಡುತ್ತಿರುವಾಗ ಸೋಷಿಯಲ್ ಮೀಡಿಯಾ ಕಂಪನಿಗಳು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕೋರ್ಟ್ ಆದೇಶ ನೀಡುವವರೆಗೂ ಕಾಯದೆ, ಇಂತಹ ವಿಷಯಗಳು ಗಮನಕ್ಕೆ ಬಂದ ತಕ್ಷಣ ಅವುಗಳನ್ನು ಸ್ವಯಂಪ್ರೇರಿತರಾಗಿ ನಿರ್ಬಂಧಿಸುವುದು ಆಯಾ ಸಂಸ್ಥೆಗಳ ಜವಾಬ್ದಾರಿಯಾಗಿದೆ" ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ಪಟ್ಟಿದೆ.

Edited By : Nagaraj Tulugeri
PublicNext

PublicNext

10/06/2026 08:28 pm

Cinque Terre

17.56 K

Cinque Terre

1

ಸಂಬಂಧಿತ ಸುದ್ದಿ