ನವದೆಹಲಿ: ಯುಎಪಿಎ (UAPA) ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಕಾಶ್ಮೀರದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಖುರ್ರಂ ಪರ್ವೇಜ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಗಂಭೀರ ಪ್ರಕರಣದಲ್ಲಿ ಪರ್ವೇಜ್‌ಗೆ ಬಿಡುಗಡೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ ಯುವ ವಕೀಲೆ ಸ್ವಾತಿ ಖನ್ನಾ ಅವರೀಗ ದೇಶಾದ್ಯಂತ ಕಾನೂನು ವಲಯದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.
ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ರವೀಂದ್ರ ದುಡೇಜಾ ಅವರಿದ್ದ ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ಪರ್ವೇಜ್ ಅವರ ಅಪೀಲನ್ನು ಪುರಸ್ಕರಿಸಿದೆ. "ಕೆಲವು ಕಟ್ಟುನಿಟ್ಟಾದ ಷರತ್ತುಗಳ ಅನ್ವಯ ನಾವು ಜಾಮೀನು ಮಂಜೂರು ಮಾಡಿದ್ದೇವೆ" ಎಂದು ನ್ಯಾಯಪೀಠ ತಿಳಿಸಿದೆ.
ಖುರ್ರಂ ಪರ್ವೇಜ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಕಾನೂನು ತಂಡದಲ್ಲಿ ಸ್ವಾತಿ ಖನ್ನಾ ಪ್ರಮುಖರಾಗಿದ್ದರು. ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೋರ್ಟ್‌ನ ವಿವರವಾದ ಆದೇಶದ ಪ್ರತಿ ಇನ್ನೂ ಅಪ್‌ಲೋಡ್ ಆಗಬೇಕಿದೆ, ಹಾಗಾಗಿ ಜಾಮೀನಿನ ಸಂಪೂರ್ಣ ಷರತ್ತುಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಪರ್ವೇಜ್ ಅವರ ಮೇಲಿರುವ ಮತ್ತೊಂದು ಪ್ರಕರಣದ ಜಾಮೀನು ಹಾಗೂ ಚಾರ್ಜ್‌ಶೀಟ್ ಮೇಲಿನ ವಾದಗಳು ಈಗಾಗಲೇ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಮುಕ್ತಾಯಗೊಂಡಿವೆ" ಎಂದು ಮಾಹಿತಿ ನೀಡಿದ್ದಾರೆ
ದೆಹಲಿ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಸ್ವಾತಿ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಅವರು ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE)ನಿಂದ ಕಾನೂನು ಸ್ನಾತಕೋತ್ತರ ಪದವಿ (LLM) ಪಡೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಎಕನಾಮಿಕ್ಸ್ ಆನರ್ಸ್ ಹಾಗೂ ಎಲ್‌ಎಲ್‌ಬಿ (LLB) ಪದವಿ ಮುಗಿಸಿದ್ದಾರೆ. ಕೇವಲ ಕೋರ್ಟ್ ರೂಮ್ ಮಾತ್ರವಲ್ಲದೆ, ಸ್ವಾತಿ ಖನ್ನಾ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಫಾಲೋವರ್ಸ್ ಹೊಂದಿರುವ ಇವರು, ನೃತ್ಯ, ನಗು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ತಮ್ಮ ವೈಯಕ್ತಿಕ ಹವ್ಯಾಸಗಳ ಝಲಕ್ ಅನ್ನು ಹಂಚಿಕೊಳ್ಳುತ್ತಿರುತ್ತಾರೆ.
ಭಾರತೀಯ ಸೇನೆಯ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ, ನಿಷೇಧಿತ ಭಯೋತ್ಪಾದಕ ಸಂಸ್ಥೆಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಎನ್‌ಐಎ (NIA) ಅಧಿಕಾರಿಗಳು 2021 ರಲ್ಲಿ ಖುರ್ರಂ ಪರ್ವೇಜ್ ಅವರನ್ನು ಬಂಧಿಸಿದ್ದರು. 2024 ರ ಡಿಸೆಂಬರ್‌ನಲ್ಲಿ ವಿಶೇಷ ನ್ಯಾಯಾಲಯ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪರ್ವೇಜ್‌ಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ.
ಸದ್ಯ ಹೈಕೋರ್ಟ್‌ನ ಸವಿವರವಾದ ಅಧಿಕೃತ ಆದೇಶದ ಪ್ರತಿಗಾಗಿ ಕಾನೂನು ವಲಯ ಕಾಯುತ್ತಿದೆ.
PublicNext
10/06/2026 06:33 pm