ಬೆಳ್ತಂಗಡಿ: 26 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಪುತ್ರನೋರ್ವನು ಪವಾಡ ಎಂಬಂತೆ ಮನೆಗೆ ಬಂದು ಸೇರಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ.
ಧರ್ಮಸ್ಥಳದ ಅಶೋಕನಗರ ನಿವಾಸಿ ಸತೀಶ್ ಎಂಬಾತ 2000 ಇಸವಿಯಲ್ಲಿ 12 ವರ್ಷ ವಯಸ್ಸಿನಲ್ಲೇ ಮನೆ ತೊರೆದಿದ್ದ. ಆಗ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಈ ಪುಟ್ಟ ಬಾಲಕ ಸತೀಶ್ ವಾಪಸ್ ಹೋಗಿದ್ದ. 26 ವರ್ಷ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಸತೀಶ್, ಬಳಿಕ ತನ್ನ ಊರು, ಕುಟುಂಬಸ್ಥರನ್ನೇ ಮರೆತಿದ್ದ.
ಆದರೆ ತಮ್ಮ ಸ್ನೇಹಿತರೊಂದಿಗೆ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಾಗ ತಮ್ಮ ಮನೆಯ ನೆನಪು ಮರಳಿದೆ. ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಹೋದಾಗ ಇದೇ ತನ್ನ ಊರು ಅಂತಾ ನೆನಪಾಗಿದೆ. ತನ್ನ ತಮ್ಮಂದಿರ ಹೆಸರು ನೆನಪಿದ್ದು ಅವರ ಮನೆ ಎಲ್ಲಿ ಹುಡುಕಾಡಿದ್ದಾರೆ. ಸುತ್ತಮುತ್ತಲಿನ ಅಂಗಡಿಯವರನ್ನು ಕೇಳಿ ಮನೆ ಹುಡುಕಿದ್ದಾರೆ.
ಹೆತ್ತ ತಾಯಿ ತನ್ನ ಮಗ ವಾಪಸ್ ಬರಬೇಕೆಂದು ದೇವರನ್ನು ನಂಬಿ ಹೊತ್ತಿದ್ದ ಹರಕೆ ಫಲಿಸಿದೆ. ಧರ್ಮಸ್ಥಳ, ಕಟೀಲು, ಪಣೋಲಿಬೈಲಿಗೆ ತಾಯಿ ಹರಕೆ ಹೊತ್ತಿದ್ದರು. ತಾನು ಸಾಯುವ ಮೊದಲು ಒಮ್ಮೆ ಮಗನನ್ನು ನೋಡಬೇಕೆಂದು ಆಸೆಯಿಂದ ಕಾಯುತ್ತಿದ್ದರು. ಕೊನೆಗೂ ಪವಾಡ ರೀತಿಯಲ್ಲಿ ತಾಯಿ ಕೋರಿಕೆ ಈಡೇರಿದೆ.
ಮನೆ ಬಿಟ್ಟು ಹೋದಾಗ ಸತೀಶ್ ವಾಪಸ್ ಆದಾಗ ಸಲೀಂ ಆಗಿದ್ದಾನೆ. ಮಹಾರಾಷ್ಟ್ರದಲ್ಲಿ ಸಲೀಂ ಅಬ್ದುಲ್ ಅನ್ಸಾರಿ ಆಗಿದ್ದಾನೆ. ತಾಲೀಮಾ ಎಂಬಾಕೆಯನ್ನು ಮದುವೆಯಾಗಿರುವ ಸತೀಶ್ ಅಲಿಯಾಸ್ ಸಲೀಂಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಕನ್ನಡ, ತುಳು ಮರೆತು ಸಂಪೂರ್ಣ ಹಿಂದಿ ಭಾಷೆಯಲ್ಲಿ ಮಾತನಾಡುವ ಸತೀಶ್ ಈಗ ಮತ್ತೆ ಮನೆ ಸೇರಿದ್ದಾನೆ.
PublicNext
11/06/2026 12:17 pm