ಬಂಟ್ವಾಳ: ಮಧ್ಯರಾತ್ರಿ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನೆರವು ಒದಗಿಸಿ ಜೀವ ಉಳಿಸಿದ ಘಟನೆ ಬಿ.ಸಿ.ರೋಡಿನ ಗೂಡಿನ ಬಳಿಯಲ್ಲಿ ನಡೆದಿದೆ.
ಗೂಡಿನಬಳಿ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಈ ಸಂದರ್ಭ ಅವರ ಮನೆಯಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಕ್ರಂದನ ಕೇಳಿಬರುತ್ತಿತ್ತು. ತಕ್ಷಣ ಅಲ್ಲೇ ಗಸ್ತು ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು.
ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ ನೆರವು ಒದಗಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಬಂಟ್ವಾಳ ನಗರ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಅವರ ಸಮಯಪ್ರಜ್ಞೆ, ತುರ್ತು ಸ್ಪಂದನೆ ಮತ್ತು ಮಾನವೀಯ ಸೇವೆಯಿಂದ ಅಶ್ರಫ್ ಅವರ ಜೀವ ಉಳಿದಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
Kshetra Samachara
13/06/2026 09:02 am
LOADING...