ಮಂಗಳೂರು: ಕಳೆದ ವರ್ಷ ಮಳೆಗಾಲದಲ್ಲಿ ಮಂಗಳೂರಿನ ಹೊರವಲಯದಲ್ಲಿ ನಡೆದ ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಾಕೃತಿಕ ವಿಕೋಪವಲ್ಲ. ಅವೈಜ್ಞಾನಿಕ ಕಾಮಗಾರಿಯ ದುಷ್ಪರಿಣಾಮ ಎಂದು ಎನ್ಐಟಿಕೆ ವರದಿಯಲ್ಲಿ ದೃಢಗೊಂಡಿದೆ. ವರದಿಯ ಆಧಾರದಲ್ಲಿ ದುರಂತದಲ್ಲಿ ಇಬ್ಬರು ಮಕ್ಕಳು, ಅತ್ತೆ, ತನ್ನೆರಡು ಕಾಲುಗಳನ್ನು ಕಳೆದುಕೊಂಡ ಸಂತ್ರಸ್ತೆ ಅಶ್ವಿನಿ ಪರ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ. ಇದೀಗ ದುರಂತಕ್ಕೆ ಕಾರಣವಾದ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ಮಂಜನಾಡಿಯ ಅಶ್ವಿನಿಯವರ ಮನೆಯ ಮೇಲಿನ ಗುಡ್ಡವನ್ನು ಅಗೆದು ರಸ್ತೆ ಮಾಡಲಾಗಿತ್ತು. ರಸ್ತೆ ಮಾಡುವ ಸಂದರ್ಭ ಅಶ್ವಿನಿ ಮನೆಯವರು ವಿರೋಧ ವ್ಯಕ್ತಪಡಿಸಿದರೂ, ಗ್ರಾಮ ಪಂಚಾಯತ್ ಹಾಗೂ ಸರಕಾರಿ ಇಂಜಿನಿಯರ್‌ಗಳು ಇದಕ್ಕೆ ಕ್ಯಾರೇ ಎನ್ನದೆ ರಸ್ತೆ ನಿರ್ಮಾಣ ಮಾಡಿದ್ದಾರೆ. ರಕ್ಕಸ ಜೆಸಿಬಿಯ ಅಗೆತದಿಂದ ನಲುಗಿದ ಭಾರೀ ಗುಡ್ಡವು 2025ರ ಮೇ 30ರಂದು ರಾತ್ರಿ ವೇಳೆ ಕುಸಿದು ಅಶ್ವಿನಿಯವರ ಮನೆ ಮೇಲೆಯೇ ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಜಖಂಗೊಂಡು ಅಶ್ವಿನಿಯವರ ಅತ್ತೆ, ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಅಶ್ವಿನಿಯವರು ತನ್ನ ಎರಡೂ ಕಾಲು ಕಳೆದುಕೊಂಡರೆ, ಅವರ ಮಾವ ಒಂದು ಕಾಲು ಕಳೆದುಕೊಳ್ಳುವಂತಾಯಿತು ಎಂದು ಅಶ್ವಿನಿಯವರ ಹಿತೈಷಿಗಳು ಆರೋಪಿಸಿದ್ದಾರೆ.
ಇಷ್ಟೊಂದು ಪ್ರಮಾಣದ ದುರಂತ ಸಂಭವಿಸಿದರೂ, ಪ್ರಕರಣದಲ್ಲಿ ಅಧಿಕಾರಿಗಳ ಲೋಪದೋಷಗಳ ವಿರುದ್ಧ ಒಂದೇ ಒಂದು ಎಫ್ಐಆರ್ ಆಗಿಲ್ಲ. ಘಟನೆ ನಡೆದು ಒಂದು ವರ್ಷವಾದರೂ ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರು ಒಮ್ಮೆಯೂ ಇತ್ತ ಕಡೆಗೆ ಬಂದು ವೀಕ್ಷಣೆ ಮಾಡಿಲ್ಲ. ಅಶ್ವಿನಿಯರ ದಾರುಣ ಸ್ಥಿತಿಯನ್ನು ಕಂಡು ಮನಕರಗದ ಕಠೋರ ಹೃದಯಿ ಅಧಿಕಾರಿಗಳು ಆಕೆಯೇ ಖುದ್ದಾಗಿ ಬಂದು ಘಟನೆಯನ್ನು ವಿವರಿಸಲಿ, ದೂರು ನೀಡಲಿ ಎಂದು ತಾಕೀತು ಮಾಡಿದ್ದರು. ಪರಿಣಾಮ ಕಾಲು ಕಳೆದುಕೊಂಡ ಅವರು ಆ್ಯಂಬುಲೆನ್ಸ್‌ನಲ್ಲಿ ಬಂದು, ವ್ಹೀಲ್ ಚೇರ್‌ನಲ್ಲಿಯೇ ಅಧಿಕಾರಿಗಳ ಬಳಿಗೆ ಎಡತಾಕುವಂತಾಗಿದೆ. ಆದರೂ ಆಕೆಗಾದ ಅನ್ಯಾಯಕ್ಕೆ ಅಧಿಕಾರಿಗಳಿಂದ ಯಾವ ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ, ಅಶ್ವಿನಿಯವರ ಮನೆಯ ಮೇಲಿನ ಗುಡ್ಡವನ್ನು ಮಾನವ ಶ್ರಮದಿಂದ ಅಗೆದು ರಸ್ತೆ ನಿರ್ಮಿಸಿದ್ದೇ ಹೊರತು ಜೆಸಿಬಿ ಕಾಮಗಾರಿಯಿಂದಲ್ಲ. ಆದ್ದರಿಂದ ಇದೊಂದು ಪ್ರಾಕೃತಿಕ ವಿಕೋಪದ ದುರಂತವೇ ಹೊರತು ಅಧಿಕಾರಿಗಳ ವೈಫಲ್ಯವಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಪರಿಶೀಲನೆಗೆ ಬಂದ ಇಂಜಿನಿಯರ್‌ಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಷರಾ ಬರೆದ ಪರಿಣಾಮ ಅಶ್ವಿನಿಯವರಿಗಾದ ಅನ್ಯಾಯಕ್ಕೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಮೂವರ ಸಾವಿಗೆ ಸಿಕ್ಕ ಪರಿಹಾರ ಹಾಗೂ ಕಳೆದುಕೊಂಡ ಕಾಲುಗಳಿಗೆ ಪರಿಹಾರದ ಹೊರತು ಜೀವನಪೂರ್ತಿ ಬೇರೆವರನ್ನೇ ಅವಲಂಬಿಸಿ ಬದುಕಬೇಕಾದ ಅಶ್ವಿನಿಯವರಿಗಾದ ಮಹಾ ಅನ್ಯಾಯಕ್ಕೆ ಈವರೆಗೆ ಯಾವ ಪರಿಹಾರವೂ ಸಿಕ್ಕಿಲ್ಲ.
ಆದ್ದರಿಂದ ಅಶ್ವಿನಿ ಪರ ಹೋರಾಟ ನಡೆಸುತ್ತಿರುವ ಅವರ ಹಿತೈಷಿಗಳು ಎನ್ಐಟಿಕೆ ನೀಡಿರುವ ವರದಿಯ ಆಧಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಈ ದುರಂತವನ್ನು ಪ್ರಶ್ನಿಸಿ ಅಧಿಕಾರಿಗಳಿಗೆ ಶಿಕ್ಷೆ ನೀಡಲಿದೆಯೇ?, ಅಶ್ವಿನಿಯವರಿಗೆ ಪರಿಹಾರ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.
PublicNext
13/06/2026 04:35 pm