ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ : ರೈತರ ಆರ್ಥಿಕ ಸ್ವಾವಲಂಬನೆಗೆ ಜೇನುಕೃಷಿ - ಜೇನುತುಪ್ಪ ಮಾರುಕಟ್ಟೆಗೆ ಬಿಡುಗಡೆ

ಶಿರಸಿ : ಟಿಆರ್‌ಸಿ ಪ್ರಧಾನ ಕಚೇರಿಯಲ್ಲಿ, ಸಂಸ್ಥೆಯ ಮಹತ್ವಾಕಾಂಕ್ಷಿ ಜೇನುಕೃಷಿ ಯೋಜನೆಯಡಿ ರೈತರು ಉತ್ಪಾದಿಸಿದ ಪರಿಶುದ್ಧ ಜೇನುತುಪ್ಪವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ನಬಾರ್ಡ್‌ನ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಆರ್.ಎನ್. ಹೆಗಡೆ ಬಂಡಿಮನೆ ಮತ್ತು ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಸಾಂಕೇತಿಕವಾಗಿ ಜೇನುತುಪ್ಪ ಬಿಡುಗಡೆಗೊಳಿಸಿದರು.

ರೈತರ ಆರ್ಥಿಕ ಸ್ವಾವಲಂಬನೆಗೆ ಜೇನುಕೃಷಿ

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಸಂಘವು ಜೇನು ಕೃಷಿ ಕೈಗೊಳ್ಳಲು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಸಾಲ ವಿತರಿಸುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ಅಡಿಕೆ ಬೆಳೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದಿಂದಾಗಿ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಕಷ್ಟದಿಂದ ರೈತರನ್ನು ಪಾರು ಮಾಡಲು ಪರ್ಯಾಯ ಮಾರ್ಗವನ್ನು ನಮ್ಮ ಸದಸ್ಯರಿಗೆ ಒದಗಿಸುವುದು ಸಂಘದ ಮುಖ್ಯ ಉದ್ದೇಶವಾಗಿತ್ತು . ಈ ಹಿನ್ನೆಲೆಯಲ್ಲಿ, ಆರ್ಥಿಕ ಸ್ವಾವಲಂಬನೆ ಸಾಧಿಸಲು ಜೇನು ಕೃಷಿ ಯೋಜನೆಯನ್ನು ಸದಸ್ಯರಿಗೆ ಪರಿಚಯಿಸಲಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರು ಜೇನು ಕೃಷಿ ಯೋಜನೆಯಡಿ ಜೇನು ಸಾಕಾಣಿಕೆ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಆಶಿಸಿದರು.

ಸಂಘದ ನಿರ್ದೇಶಕ ಸಂತೋಷಕುಮಾರ ಗೌಡರ ಕಸಗೆ ಮಾತನಾಡಿ, ಜೇನು ಕೃಷಿ ಆಧುನಿಕ ಕೃಷಿ ವಿಧಾನಗಳಲ್ಲೊಂದಾಗಿದೆ. ಇದು ವಿಶೇಷವಾಗಿ ಚಿಕ್ಕ ಹಿಡುವಳಿ ಹೊಂದಿರುವ ಸಂಘದ ಸದಸ್ಯರಿಗೆ ಆರ್ಥಿಕವಾಗಿ ಹೆಚ್ಚಿನ ನೆರವು ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಆರ್‌ಸಿ ನಿರ್ದೇಶಕರಾದ ಎಸ್.ಎನ್. ಹೆಗಡೆ ಹಾವಳಿಮನೆ, ವಿಶ್ವೇಶ್ವರ ಹೆಗಡೆ ಆಗ್ಲಾಲಕಿಬ್ಬಳ್ಳಿ, ಟಿಆರ್‌ಸಿ ಮುಖ್ಯ ಕಾರ್ಯನಿರ್ವಾಹಕ ಕಿರಣ ಭಟ್ ಮಾವಿನಕೊಪ್ಪ, ಮಕರಂದ ರೈತ ಉತ್ಪಾದಕ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಹರ್ಷ ಹೆಗಡೆ ಹಾಗೂ ಟಿಆರ್‌ಸಿ ರೈತ ಉತ್ಪಾದಕ ಸಂಸ್ಥೆಯ ಪ್ರಸಾದ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/06/2026 07:14 pm

Cinque Terre

2.54 K

Cinque Terre

0