ಮುಂಬೈ: ಖ್ಯಾತ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ ಮೊಹ್ಸಿನ್ ಅಖ್ತರ್ (ಭಾನುವಾರ ನಿಧಾ ಭಟ್ ಅವರನ್ನು ಎರಡನೇ ಮದುವೆಯಾಗಿದ್ದಾರೆ.
ನಟಿ ಊರ್ಮಿಳಾ ಅವರಿಂದ ವಿಚ್ಛೇದನ ಪಡೆದು ಎರಡು ವರ್ಷಗಳ ಬಳಿಕ ಮೊಹ್ಸಿನ್ ಇದೀಗ ನಿಧಾ ಭಟ್ ಅವರ ಜೊತೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿವಾಹದ ಫೋಟೋಗಳ ಜೊತೆಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಮೊಹ್ಸಿನ್ ತಮ್ಮ ಪೋಸ್ಟ್‌ನಲ್ಲಿ, "ಒಳ್ಳೆಯ ಉದ್ದೇಶಗಳು, ಪ್ರಾಮಾಣಿಕ ಪ್ರೀತಿ, ತಾಳ್ಮೆ ಹಾಗೂ ಕೃತಜ್ಞತೆ ತುಂಬಿದ ಹೃದಯ. ನಿಮ್ಮ ಆತ್ಮವನ್ನು ಶುದ್ಧವಾಗಿಟ್ಟುಕೊಂಡು, ಜೀವನದ ನೋವುಗಳನ್ನು ಮರೆತು ಸಂತೋಷದಿಂದ ಸಾಗಲು ಅಲ್ಲಾಹುವಿನ ಆಶೀರ್ವಾದ ಅಗತ್ಯ. ಇದೀಗ ಅಲ್ಲಾಹು ನಿಧಾ ಭಟ್ ಮತ್ತು ನನ್ನನ್ನು ಒಂದಾಗಿಸಿದ್ದಾನೆ. ನೀನು ನನ್ನ ಜೀವನಕ್ಕೆ ಹೊಸ ಬೆಳಕನ್ನು ತಂದಿದ್ದೀಯಾ. ಮೈ ಲವ್, ನಿನಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ, "ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ನನ್ನ ತಾಯಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಸದಾ ನನ್ನ ಮೇಲಿರಲಿ. ನನ್ನ ಈ ಮದುವೆಯಿಂದ ನಿಮಗೆ ಇನ್ನಷ್ಟು ನೆಮ್ಮದಿ ಸಿಕ್ಕಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಊರ್ಮಿಳಾ ಮತ್ತು ಮೊಹ್ಸಿನ್ 2016ರ ಫೆಬ್ರವರಿ 4ರಂದು ವಿವಾಹವಾಗಿದ್ದರು. ಆಗ ಇವರಿಬ್ಬರ ವಿವಾಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಏಕೆಂದರೆ, ಮೊಹ್ಸಿನ್ ಊರ್ಮಿಳಾ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದು ಹಾಗೂ ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದ ಕಾರಣ ಅವರ ವಿವಾಹ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಆದರೆ, 2024ರಲ್ಲಿ ಈ ದಂಪತಿಗಳ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಊರ್ಮಿಳಾ ಅವರು ವಿಚ್ಛೇದನಕ್ಕಾಗಿ ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಊರ್ಮಿಳಾ ಅವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ 'ಕಲಿಯುಗ್' ಮತ್ತು 'ಮಾಸೂಮ್' ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ 1991ರಲ್ಲಿ ತೆರೆಕಂಡ 'ನರಸಿಂಹ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ಅವರು ಬಾಲಿವುಡ್‌ನ 'ರಂಗೀಲಾ', 'ಜುದಾಯಿ', 'ಸತ್ಯಾ', 'ಕೌನ್', 'ಪ್ಯಾರ್ ತೂನೆ ಕ್ಯಾ ಕಿಯಾ', 'ಭೂತ್' ಮತ್ತು 'ಏಕ್ ಹಸೀನಾ ಥಿ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಇದೀಗ ಅವರ ಮಾಜಿ ಪತಿ ಮೊಹ್ಸಿನ್ ಅಖ್ತರ್ ಅವರ ಎರಡನೇ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
PublicNext
15/06/2026 02:15 pm