ತಮಿಳುನಾಡು ರಾಜಕಾರಣ ಮತ್ತು ಸಿನಿಮಾ ರಂಗದ ಮೇಲೆ ಕನ್ನಡಿಗರಿಗೆ ಯಾವಾಗಲೂ ಒಂದು ವಿಶೇಷ ಕಣ್ಣಿರುತ್ತದೆ. ಅದರಲ್ಲೂ ತಮಿಳು ಚಿತ್ರರಂಗದ ‘ದಳಪತಿ’ ವಿಜಯ್ ಈಗ ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ. ಕರ್ನಾಟಕದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಜೋಸೆಫ್ ವಿಜಯ್, ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಅವರು ಬರುತ್ತಿರುವುದು ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕಾಗಲೀ ಅಥವಾ ರಾಜ್ಯ ಸರ್ಕಾರದ ಜೊತೆಗಿನ ಮಾತುಕತೆಗಾಗಲಿ ಅಲ್ಲ; ಬದಲಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ!
ಕೌತುಕ ಮೂಡಿಸಿದ ಸಡನ್ ವಿಸಿಟ್!
ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಜಯ್ ತೀವ್ರ ಕಾರ್ಯನಿರತರಾಗಿದ್ದಾರೆ. ಈಗಾಗಲೇ ಎರಡ್ಮೂರು ಬಾರಿ ದೆಹಲಿ ಪ್ರವಾಸ ಮಾಡಿ ಸರ್ಕಾರದ ಕೆಲಸ ಕಾರ್ಯಗಳನ್ನು ನಿಭಾಯಿಸಿರುವ ಅವರಿಗೆ, ಸ್ವಂತ ರಾಜ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಸುತ್ತಾಡಲು ಇನ್ನು ಸಮಯ ಸಿಕ್ಕಿಲ್ಲ. ಇಂತಹ ಸನ್ನಿವೇಶದಲ್ಲಿ ಅವರು ನೆರೆ ರಾಜ್ಯ ಕರ್ನಾಟಕದ ಕೊಲ್ಲೂರಿಗೆ ಬರುತ್ತಿರುವುದು ತೀವ್ರ ಕೌತುಕ ಮೂಡಿಸಿದೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ ತಿರುಚೆಂದೂರಿನ ಮುರುಗನ್ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ 'ಟೆಂಪಲ್ ರನ್' ಮಾಡಿದ್ದ ವಿಜಯ್, ಸಿಎಂ ಆದ ಬಳಿಕ ಯಾವುದೇ ದೇವಸ್ಥಾನಕ್ಕೆ ಹೋಗಿರಲಿಲ್ಲ. ಇದೀಗ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲೇ, ಶಕ್ತಿ ಆರಾಧನೆಗೆ ಪ್ರಶಸ್ತ ದಿನವಾದ ಶುಕ್ರವಾರ ಮೂಕಾಂಬಿಕೆಯ ಸನ್ನಿಧಿಗೆ ಆಗಮಿಸುತ್ತಿದ್ದಾರೆ. ಜೋಸೆಫ್ ವಿಜಯ್ ಅವರಿಗೆ ಕೊಲ್ಲೂರು ದೇವಿಯ ಮೇಲೆ ನಂಬಿಕೆ ಬಂದಿದ್ದೇಕೆ? ಯಾರಾದರೂ ಸಲಹೆ ನೀಡಿದ್ದಾರಾ ಅಥವಾ ಇದು ಹರಕೆಯೇ? ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.
ಸಿಎಂ ವಿಜಯ್ ವೇಳಾಪಟ್ಟಿ ಹೇಗೆ?
ಜೂನ್ 12ರಂದು ಶುಕ್ರವಾರ ಮಧ್ಯಾಹ್ನ 12:30: ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ. ಮಧ್ಯಾಹ್ನ 3:00: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಮತ್ತು ವಿಶೇಷ ಪೂಜೆ.
ಸಂಜೆ: ಪೂಜೆ ಮುಗಿಸಿ ನೇರವಾಗಿ ಮಂಗಳೂರು ಮಾರ್ಗವಾಗಿ ಚೆನ್ನೈಗೆ ವಾಪಸ್.
ತಮಿಳುನಾಡು ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತಾ ಕಾರಣಗಳಿಗಾಗಿ ಶುಕ್ರವಾರ ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ಸಾರ್ವಜನಿಕ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯ್ ಕೊಲ್ಲೂರಿಗೆ ಬರುತ್ತಿರುವ ವಿಚಾರ ತಮಿಳುನಾಡಿನಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ಏಕೆಂದರೆ, ತಮಿಳುನಾಡನ್ನು ಆಳಿದ ಘಟಾನುಘಟಿ ನಾಯಕರಿಗೂ ಮತ್ತು ಕೊಲ್ಲೂರು ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ.
ದೇವಿಗೆ ಚಿನ್ನದ ಖಡ್ಗ ಕೊಟ್ಟಿದ್ದ ಎಂಜಿಆರ್!
ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಅಲ್ಲಿನ ಮಾಜಿ ಮುಖ್ಯಮಂತ್ರಿಗಳೇ ಕೊಲ್ಲೂರಿನ ಖಾಯಂ ಭಕ್ತರಾಗಿದ್ದರು ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಅದಕ್ಕೆ ಅತ್ಯುತ್ತಮ ಉದಾಹರಣೆ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ (MGR).
ತಮಿಳು ಚಿತ್ರರಂಗದ ಮೇರು ನಟ ಮತ್ತು ದಂತಕತೆಯಾಗಿದ್ದ ಎಂಜಿಆರ್, ಸಿನಿಮಾದಲ್ಲಿದ್ದ ತಮ್ಮ ಅಪಾರ ಜನಪ್ರಿಯತೆಯೊಂದಿಗೆ ಸ್ವಂತ ಪಕ್ಷ (AIADMK) ಸ್ಥಾಪಿಸಿ ಮುಖ್ಯಮಂತ್ರಿಯಾದವರು. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ತಮಿಳುನಾಡನ್ನು ಆಳಿದ ಎಂಜಿಆರ್, ಇವತ್ತಿಗೂ ದ್ರಾವಿಡರ ಪಾಲಿಗೆ ಅತ್ಯಂತ ಜನಪ್ರಿಯ ನಾಯಕ. ಇವರು ತಾವು ಸಿಎಂ ಆಗಿದ್ದ ಅವಧಿಯಲ್ಲಿ ಹಲವು ಬಾರಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇಂದು ಕೊಲ್ಲೂರು ದೇವಸ್ಥಾನದಲ್ಲಿ ದೇವಿಗೆ ಅಲಂಕರಿಸಲಾಗುವ ಪ್ರಸಿದ್ಧ ಚಿನ್ನದ ಖಡ್ಗವನ್ನು ದಾನವಾಗಿ ನೀಡಿದವರು ಇದೇ ಎಂಜಿ ರಾಮಚಂದ್ರನ್. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ಅವರು 1 ಕೆಜಿ ತೂಕದ ಚಿನ್ನದ ಖಡ್ಗವನ್ನು ದೇವಿಗೆ ಸಮರ್ಪಿಸಿದ್ದರು.
ಚಂಡಿಕಾ ಹೋಮ ಮಾಡಿಸಿದ್ದ ಜಯಲಲಿತಾ
ಎಂಜಿಆರ್ ಬಳಿಕ ಅವರ ಉತ್ತರಾಧಿಕಾರಿ, ಪುರಚ್ಚಿ ತಲೈವಿ ಜಯಲಲಿತಾ ಕೂಡ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತೆಯಾಗಿದ್ದರು. ಜಯಲಲಿತಾ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು, ಜೈಲು ವಾಸವನ್ನೂ ಅನುಭವಿಸಿದವರು. ತಮ್ಮ ಜೀವನದಲ್ಲಿ ತೀವ್ರ ಸವಾಲುಗಳು ಎದುರಾದಾಗ ಜಯಲಲಿತಾಗೆ ನೆನಪಾಗಿದ್ದೇ ಕೊಲ್ಲೂರು ಮೂಕಾಂಬಿಕೆ.
ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಜಯಲಲಿತಾ, ತಮ್ಮ ಆಪ್ತ ಜ್ಯೋತಿಷಿಯೊಬ್ಬರ ಸಲಹೆಯಂತೆ 2004ರಲ್ಲಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಷ್ಟಗಳು ನಿವಾರಣೆಯಾಗಿ, ಇಷ್ಟಾರ್ಥಗಳು ನೆರವೇರಲಿ ಎಂದು ದೇವಿಗೆ ಅತ್ಯಂತ ಪ್ರಿಯವಾದ ‘ಚಂಡಿಕಾ ಹೋಮ’ವನ್ನು ಮಾಡಿಸಿದ್ದರು. ಇದಲ್ಲದೆ, ಶುಕ್ರವಾರದ ವಿಶೇಷ ಅನ್ನ ಸಂತರ್ಪಣೆಗಾಗಿ 30 ಸಾವಿರ ರೂಪಾಯಿ ದೇಣಿಗೆ ಮತ್ತು 1 ಟನ್ ತುಪ್ಪವನ್ನು ಕಾಣಿಕೆಯಾಗಿ ನೀಡಿದ್ದರು. ಅಷ್ಟೇ ಅಲ್ಲ, ಜಯಲಲಿತಾ ಅವರ ಆಡಳಿತಾವಧಿಯಲ್ಲೇ ತಮಿಳುನಾಡಿನ ಪ್ರಮುಖ ನಗರಗಳಿಂದ ಕೊಲ್ಲೂರಿಗೆ ನೇರ ಸರ್ಕಾರಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿತ್ತು.
ಜಯಲಲಿತಾ ಭೇಟಿಯ ನಂತರ ತಮಿಳುನಾಡಿನಲ್ಲಿ ಈ ದೇಗುಲದ ಖ್ಯಾತಿ ಮತ್ತಷ್ಟು ಹೆಚ್ಚಿತು ಹಾಗೂ ಅಲ್ಲಿಂದ ಬರುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಯಿತು. ಹೀಗೆ ತಮಿಳುನಾಡು ಸಿಎಂಗಳೊಂದಿಗೆ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ನಂಟಿದೆ. ಈಗ ದ್ರಾವಿಡ ನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕೂಡ ಅದೇ ಹಾದಿಯಲ್ಲಿ ಮುನ್ನಡೆದಿದ್ದು, ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲೇ ಮೂಕಾಂಬಿಕೆಯ ಸನ್ನಿಧಿಗೆ ಓಡೋಡಿ ಬರುತ್ತಿದ್ದಾರೆ.
PublicNext
11/06/2026 09:08 pm