ಬೆಂಗಳೂರು: ಮಹಿಳಾ ಸಬಲೀಕರಣದ ಹಾದಿಯಲ್ಲಿ ದೇಶಕ್ಕೇ ಮಾದರಿಯಾಗಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ (ಗೃಹಲಕ್ಷ್ಮಿಯರ ಉಚಿತ ಬಸ್ ಪ್ರಯಾಣ) ಇಂದಿಗೆ (ಜೂನ್ 11) ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. 2023ರ ಜೂನ್ 11ರಂದು ಚಾಲನೆ ಪಡೆದ ಈ ಯೋಜನೆಯು ಕೇವಲ ಉಚಿತ ಪ್ರಯಾಣವಾಗಿ ಉಳಿಯದೇ, ಮಹಿಳೆಯರ ಆತ್ಮಗೌರವ, ಆರ್ಥಿಕ ಸ್ವಾತಂತ್ರ್ಯ ಮತ್ತು ಉದ್ಯೋಗಾವಕಾಶಗಳ ಹೆಮ್ಮೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ಹಂಚಿಕೊಂಡಿದ್ದಾರೆ.
ಯೋಜನೆಯ ಮೂರನೇ ವರ್ಷದ ಸಂಭ್ರಮದ ಅಂಗವಾಗಿ ರಾಜ್ಯ ಸರ್ಕಾರವು ವಿಶೇಷ ಪ್ರಚಾರದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಬಸ್ ಹತ್ತುತ್ತಿರುವುದು, ಯೋಜನೆಯ ಆರಂಭದ ದಿನಗಳು ಹಾಗೂ ಈ ಯೋಜನೆಯಿಂದ ಮಹಿಳೆಯರ ಆರ್ಥಿಕ ಸ್ಥಿತಿಗತಿ ಹೇಗೆ ಸುಧಾರಿಸಿದೆ ಎಂಬ ಯಶೋಗಾಥೆಯನ್ನು ಹಂಚಿಕೊಳ್ಳಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ #Shakti ಮತ್ತು #KarnatakaModel ಹ್ಯಾಶ್‌ಟ್ಯಾಗ್‌ಗಳು ಭಾರಿ ವೈರಲ್ ಆಗುತ್ತಿವೆ.
ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಯು ಸೃಷ್ಟಿಸಿರುವ ದಾಖಲೆಗಳು ಒಂದೆರಡಲ್ಲ. ಇದು ಜಾಗತಿಕ ಮಟ್ಟದಲ್ಲೂ ದೇಶದ ಗಮನ ಸೆಳೆದಿದೆ:
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ (KSRTC, BMTC, NWKRTC, KKRTC) ಮೂಲಕ ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಇದುವರೆಗೆ 500 ಕೋಟಿಗೂ ಹೆಚ್ಚು ಬಾರಿ ಉಚಿತವಾಗಿ ಪ್ರಯಾಣಿಸಿ ಇತಿಹಾಸ ನಿರ್ಮಿಸಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತವಾಗಿ ಸಾರಿಗೆ ವ್ಯವಸ್ಥೆ ಬಳಸಿದ ಅಪರೂಪದ ಸಾಧನೆಗಾಗಿ ‘ಶಕ್ತಿ’ ಯೋಜನೆಯು ಪ್ರತಿಷ್ಠಿತ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ (Golden Book of World Records) ಪುಟ ಸೇರಿದೆ.
ಈ ಯಶಸ್ಸಿನ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಶಕ್ತಿ ಯೋಜನೆಯು ಮಹಿಳೆಯರಿಗೆ ಸಮಾಜದಲ್ಲಿ ಹೊಸ ಶಕ್ತಿಯನ್ನು ನೀಡಿದೆ. ವರದಿಗಳ ಪ್ರಕಾರ, ಈ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ ಶೇ. 23 ರಷ್ಟು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಶೇ. 21 ರಷ್ಟು ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ನೆರವಾಗಿದೆ" ಎಂದಿದ್ದಾರೆ.
ಕರ್ನಾಟಕದ ಈ ಯಶಸ್ವೀ ಮಾದರಿಯನ್ನು ಕಂಡು ಪ್ರಭಾವಿತರಾಗಿರುವ ದೇಶದ ಇತರ ಕೆಲವು ರಾಜ್ಯಗಳು ಸಹ ಇದೇ ರೀತಿಯ ಉಚಿತ ಬಸ್ ಪ್ರಯಾಣದ ಯೋಜನೆಗಳನ್ನು ತಮ್ಮಲ್ಲಿ ಜಾರಿಗೆ ತರಲು ಮುಂದಾಗಿರುವುದು ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ.
PublicNext
11/06/2026 07:27 pm