ವಿಜಯಪುರ: ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ - ಬಂಗಾರ ಮರಳಿಸುವಂತೆ ಗ್ರಾಹಕರ ಪ್ರತಿಭಟನೆ
ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎದುರು ನಿನ್ನೆ ತಡರಾತ್ರಿ ಹೈಡ್ರಾಮಾ ನಡೆಯಿತು. ಕಳೆದ ಸೆಪ್ಟೆಂಬರ್ 16, 2025 ರಂದು ಇದೇ ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಮಾಡಲಾಗಿತ್ತು. ಗ್ರಾಹಕರು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದರು. ದರೋಡೆ ನಡೆದು ಬರೋಬ್ಬರಿ 8 ತಿಂಗಳು ಕಳೆದರೂ ಬ್ಯಾಂಕ್‌ನಲ್ಲಿಟ್ಟಿದ್ದ ಬಂಗಾರ ಮರಳಿ ಸಿಗದ ಕಾರಣ ಗ್ರಾಹಕರು ಬ್ಯಾಂಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿದ್ದ ಬ್ಯಾಂಕ್ ಅಧಿಕಾರಿಗಳು, ಇದೇ ಜೂನ್ 6 ರಂದು ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು. ಗ್ರಾಹಕರು ಅಡವಿಟ್ಟ ಚಿನ್ನದ ನಿವ್ವಳ ತೂಕಕ್ಕೆ ಇಂದಿನ ಮಾರುಕಟ್ಟೆ ಬೆಲೆಯ ಜೊತೆಗೆ ಶೇಕಡಾ 20 ರಷ್ಟು ಹೆಚ್ಚುವರಿ ಹಣ ನೀಡುವುದಾಗಿ ಬ್ಯಾಂಕ್ ಸಿಬ್ಬಂದಿ ಒಪ್ಪಿಕೊಂಡಿದ್ದರು. ಆದರೆ ಗ್ರಾಹಕರು ಮಾತ್ರ ಅಸಲು ತೂಕದ ಚಿನ್ನದ ಇಂದಿನ ಮಾರುಕಟ್ಟೆ ಬೆಲೆಯನ್ನೇ ನೀಡುವಂತೆ ಪಟ್ಟು ಹಿಡಿದಿದ್ದರು. ಅಧಿಕಾರಿಗಳು ನೀಡಿದ್ದ ಜೂನ್ 6ರ ಗಡುವು ಮುಗಿದು, ಜೂನ್ 10 ಬಂದರೂ ಹಣ ನೀಡದ ಹಿನ್ನೆಲೆಯಲ್ಲಿ ಗ್ರಾಹಕರ ತಾಳ್ಮೆ ಕಳೆದುಕೊಂಡು ಬ್ಯಾಂಕ್ ನಲ್ಲಿ ಪ್ರತಿಭಟನೆ ನಡೆಸಿದರು...
ಚಡಚಣ ಪಟ್ಟಣದಲ್ಲಿ ನಡೆದಿದ್ದ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಬಳಸಿದ್ದ ಒಂದು ಕಾರು ಒಂದು ಬೈಕ್ ಹಾಗೂ ಒಟ್ಟು 9.01 ಕೆಜಿ ಚಿನ್ನಾಭರಣ ಹಾಗೂ 86 ಲಕ್ಷ 31 ಸಾವಿರದ 220 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ದರೋಡೆ ಪ್ರಕರಣಕ್ಕೆ ಬಂದೂಕು ಪೂರೈಸಿದ್ದ ಬಿಹಾರ ಮೂಲದ ರಾಕೇಶಕುಮಾರ ಸಹಾನಿ, ರಾಜಕುಮಾರ ಪಾಸ್ವಾನ ಹಾಗೂ ರಕ್ಷಕಕುಮಾರ ಮ್ಯಾತೋ ಎಂಬುವರನ್ನ ಹೆಡೆಮುರಿಗೆ ಕಟ್ಟುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಪೊಲೀಸರು ಈ ಪ್ರಕರಣದ ವಿಚಾರವಾಗಿ ತಾವು ವಶಪಡಿಸಿಕೊಂಡ ಚಿನ್ನಾಭರಣ ಈಗಾಗಲೇ ಕೋರ್ಟ್ ಗೆ ಸಬ್ಮಿಟ್ ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ನಿಂದ ಇದೇ ಜೂನ್ 5 ರಂದು ರಿಲೀಸ್ ಮಾಡಿದ್ದು ಅದು ಈಗ ಬ್ಯಾಂಕ್ ನವರಿಗೆ ತಲುಪಿದೆ. ಆದರೆ ಬ್ಯಾಂಕ್ ನವರು ತಮ್ಮ ಚಿನ್ನಾಭರಣ ಮರಳಿ ಕೊಡಲಿಲ್ಲ ಎಂಬ ಕಾರಣಕ್ಕೆ ಗ್ರಾಹಕರು ಪ್ರತಿಭಟನೆ ನಡೆಸಿದರು...
ಬ್ಯಾಂಕ್ ನಲ್ಲಿ ಗ್ರಾಹಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಇಂಡಿ ಡಿವೈಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಶೀಘ್ರದಲ್ಲೇ ಬ್ಯಾಂಕ್ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ, ಗ್ರಾಹಕರು ತಡರಾತ್ರಿ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದು ಮನೆಗೆ ತೆರಳಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುತ್ತಾರಾ ಅಥವಾ ಗ್ರಾಹಕರ ಹೋರಾಟ ಹೀಗೆಯೇ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಜಯಪುರ...
PublicNext
12/06/2026 08:50 am